ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮುಂಗಾರುಪೂರ್ವ ಮಳೆ ಹಾಗೂ ಭಾರಿ ಗಾಳಿಯ ಆರ್ಭಟಕ್ಕೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮೆಸ್ಕಾಂ ವ್ಯಾಪ್ತಿಯಲ್ಲಿ ಭಾರೀ ಪ್ರಮಾಣದ ಆಸ್ತಿಪಾಸ್ತಿ ಹಾನಿ ಸಂಭವಿಸಿದ್ದು, ಒಟ್ಟು 3.21 ಕೋಟಿ ರೂಪಾಯಿಗಳಿಗೂ ಅಧಿಕ ನಷ್ಟ ಉಂಟಾಗಿದೆ.
ಮೆಸ್ಕಾಂ ಅಂಕಿ-ಅಂಶಗಳ ಪ್ರಕಾರ, ಏಪ್ರಿಲ್ 1ರಿಂದ ಜೂನ್ 1ರವರೆಗೆ ಸಂಭವಿಸಿದ ಪ್ರಕೃತಿ ವಿಕೋಪದಿಂದ ಜಿಲ್ಲೆಯ ವಿದ್ಯುತ್ ಮೂಲಸೌಕರ್ಯಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಬಿರುಗಾಳಿಯ ಪರಿಣಾಮ ಜಿಲ್ಲೆಯ ವಿವಿಧ ಭಾಗಗಳಲ್ಲಿ ಒಟ್ಟು 1881 ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, 37.62 ಕಿಲೋಮೀಟರ್ ಉದ್ದದ ವಿದ್ಯುತ್ ಮಾರ್ಗಗಳು ಸಂಪೂರ್ಣ ಹಾನಿಗೀಡಾಗಿವೆ.

ವಿದ್ಯುತ್ ಕಂಬಗಳು ಹಾಗೂ ಮಾರ್ಗಗಳು ಹಾನಿಗೊಳಗಾದ ಪರಿಣಾಮ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿತ್ತು. ಆದರೆ ಮೆಸ್ಕಾಂ ಸಿಬ್ಬಂದಿ ತುರ್ತು ಕಾರ್ಯಾಚರಣೆ ನಡೆಸಿ ಯುದ್ಧೋಪಾದಿಯಲ್ಲಿ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.


ಹಾನಿಗೊಳಗಾಗಿದ್ದ ಎಲ್ಲಾ 37.62 ಕಿಲೋಮೀಟರ್ ವಿದ್ಯುತ್ ಮಾರ್ಗಗಳನ್ನು ಈಗಾಗಲೇ ಸರಿಪಡಿಸಲಾಗಿದ್ದು, ಬಿದ್ದಿದ್ದ ಕಂಬಗಳ ಸ್ಥಳದಲ್ಲಿ ಹೊಸ ಕಂಬಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಪುನಃಸ್ಥಾಪನೆಯಾಗಿ ಸಮಸ್ಯೆ ಬಗೆಹರಿದಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.













