
ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಜನರ ನಡುವೆ ಸಂಬಂಧ ಬೆಸೆಯಲಾಗುತ್ತದೆ. ಇದರಿಂದ ನೋವು–ನಲಿವುಗಳನ್ನು ಹಂಚಿಕೊಳ್ಳಲು ಅವಕಾಶ ದೊರಕುತ್ತಿದ್ದು, ಸಮಾಜದಲ್ಲಿ ಉತ್ತಮ ಬಾಂಧವ್ಯ ಬೆಳೆಯಲು ಸಾಧ್ಯ ಎಂದು ಶೃಂಗೇರಿ ಆದಿಚುಂಚನಗಿರಿ ಮಠದ ಗುರುಗಳಾದ ಗುಣನಾಥ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ವರ್ಷದ ಮೊದಲ ಸೂರ್ಯಗ್ರಹಣ ಯಾವಾಗ?; ಯಾವ ರಾಶಿಗೆ ಶುಭ, ಯಾರಿಗೆ ಅಶುಭ?

ಶೃಂಗೇರಿ ಆದಿಚುಂಚನಗಿರಿ ಮಠದ ಬಿಜಿಎಸ್ ನಿಸರ್ಗ ಸಿರಿ ರಂಗಮಂಟಪದಲ್ಲಿ ವಿಶ್ವಮಾನವ ದಿನಾಚರಣೆ ಹಾಗೂ ಆದಿಚುಂಚನಗಿರಿ ಮಠದ ಪರಮಪೂಜ್ಯ ಬಾಲಗಂಗಾಧರನಾಥ ಸ್ವಾಮೀಜಿಯವರ ಜಯಂತ್ಯುತ್ಸವದ ಪ್ರಯುಕ್ತ ರಂಗ ಸಿಂಗಾರ ವೇದಿಕೆ ಆಯೋಜಿಸಿದ್ದ ‘ಜತೆಗಿರುವನು ಚಂದಿರ’ ನಾಟಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ಕಲೆಗಳಿಗೂ ನಾಟಕವೇ ಮೂಲಾಧಾರ ಎಂದು ಹೇಳಿದ ಸ್ವಾಮೀಜಿ, ಜ್ಞಾನ ಮತ್ತು ವಿಮರ್ಶಾತ್ಮಕ ಚಿಂತನೆಗಳು ಮೂಢನಂಬಿಕೆಗಳನ್ನು ದೂರ ಮಾಡುತ್ತವೆ ಎಂದರು. ಪ್ರಾರ್ಥನೆ, ಧ್ಯಾನ ಹಾಗೂ ನೈತಿಕ ಜೀವನದಂತಹ ಅರ್ಥಪೂರ್ಣ ಅಭ್ಯಾಸಗಳು ದೈವಿಕ ಮನಸ್ಸಿನೊಂದಿಗೆ ಆಳವಾದ ಸಂಪರ್ಕವನ್ನು ಬೆಳೆಸುತ್ತವೆ. ಪಂಚಭೂತಗಳಾದ ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶಗಳು ಮಾನವ ಅಸ್ತಿತ್ವದ ಮೂಲ ಅಂಶಗಳಾಗಿದ್ದು, ಅವುಗಳನ್ನು ಕಾಪಾಡಿ ಮುಂದಿನ ಪೀಳಿಗೆಗೆ ಉಳಿಸುವುದು ನಮ್ಮ ಕರ್ತವ್ಯ. ಈ ದೃಷ್ಠಿಯಿಂದಲೇ ಬಾಲಗಂಗಾಧರನಾಥ ಸ್ವಾಮೀಜಿ 5 ಕೋಟಿ ಗಿಡಗಳನ್ನು ನೆಟ್ಟು ಪ್ರಕೃತಿ ಸಂರಕ್ಷಣೆಯ ಮಹತ್ವವನ್ನು ತಿಳಿಸಿದ್ದರು ಎಂದು ಸ್ಮರಿಸಿದರು.

ರಂಗ ಸಿಂಗಾರ ವೇದಿಕೆಯ ಅಧ್ಯಕ್ಷ ಕಲ್ಕುಳಿ ಚಂದ್ರಶೇಖರ್ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಪೂರಕವಾಗಿವೆ. ಕಲಾವಿದರು, ಸಾಹಿತಿಗಳು, ಕಾದಂಬರಿಕಾರರು ಇದ್ದರೆ ಮಾತ್ರ ದೇಶ ಉಳಿಯಲು ಸಾಧ್ಯ. ನಾಟಕದ ಪಾತ್ರಗಳ ಮೂಲಕ ಸಮಾನತೆ ಮತ್ತು ನಂಬಿಕೆಯಿಂದ ಬದುಕುವ ಪಾಠವನ್ನು ಸಮಾಜಕ್ಕೆ ನೀಡಲಾಗುತ್ತದೆ. ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಇದನ್ನೂ ಓದಿ: ಸೂರ್ಯನಂತೆ ಹೊಳೆಯಲಿದೆ ಈ ರಾಶಿಯರ ಅದೃಷ್ಟ!; ಯಾವ ರಾಶಿಯವರಿಗೆ ಅದೃಷ್ಟ?
ವೇದಿಕೆಯ ಸಂಚಾಲಕ ಅನಿಲ್ ಹೊಸಕೊಪ್ಪ ಮಾತನಾಡಿ, ಈ ನಾಟಕವು ಭಾರತ–ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿ ಕುಟುಂಬಗಳು ಅನುಭವಿಸಿದ ನೋವು, ಯಾತನೆ ಮತ್ತು ಸಮಾಜದ ದೃಷ್ಟಿಕೋನವನ್ನು ಬಿಂಬಿಸುತ್ತದೆ. ಯುದ್ಧ, ದೇಶ ವಿಭಜನೆ, ಅಭಿವೃದ್ಧಿ ಯೋಜನೆಗಳು ಹಾಗೂ ಆಣೆಕಟ್ಟು ನಿರ್ಮಾಣಗಳ ನೆಪದಲ್ಲಿ ನಡೆದ ಲಕ್ಷಾಂತರ ಕುಟುಂಬಗಳ ಸ್ಥಳಾಂತರ–ಉಚ್ಛಾಟನೆಗಳ ಹಿನ್ನೆಲೆಯಲ್ಲಿಯೇ ದ್ವೇಷವನ್ನು ಅಳಿಸಿ ಪ್ರೀತಿಯನ್ನು ಹಂಚುವ ಸಂದೇಶ ಈ ನಾಟಕ ಹೊಂದಿದೆ ಎಂದರು. ಶೊಲೋಮ್ ಅಲೈಖೆಮ್ ಅವರ ಕಥೆಗಳನ್ನು ಆಧರಿಸಿ ಜೋಸೆಫ್ ಸ್ಟೀನ್ ರಚಿಸಿದ ‘ಫಿಡ್ಲರ್ ಆನ್ ದಿ ರೂಫ್’ ವಿಶ್ವದ ಶ್ರೇಷ್ಠ ಸಂಗೀತ ನಾಟಕಗಳಲ್ಲಿ ಒಂದಾಗಿದ್ದು, ಅದರ ಹಾಸ್ಯಪ್ರಜ್ಞೆ ಹಾಗೂ ದಟ್ಟ ಕೌಟುಂಬಿಕತೆಯೇ ಈ ನಾಟಕದ ಜೀವಾಳವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು. ನಾಟಕ ವೀಕ್ಷಿಸಲು ಸುಮಾರು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಸೇರಿದ್ದರು. ಸಮಾರಂಭದಲ್ಲಿ ನಾಟಕದ ನಿರ್ದೇಶಕ ಹುಲುಗಪ್ಪ ಕಟ್ಟೀಮನಿ ಹಾಗೂ ಕಲಾವಿದರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ: ಅಂಚೆ ಇಲಾಖೆ ಜೊತೆಗೂಡಿ ಸ್ವಂತ ಉದ್ಯಮ ಆರಂಭಿಸಿ; 20,000 ರೂ. ದಿಂದ 80,000 ರೂ.ವರೆಗೆ ಗಳಿಸಿ!
ಈ ಸಂದರ್ಭದಲ್ಲಿ ರಂಗ ಸಿಂಗಾರದ ರಮೇಶ್ ಭಟ್ ಕೊಡತಲು, ದಿನೇಶ್ ನೆಮ್ಮಾರ್, ಪ್ರದೀಪ್ ಕಲ್ಲೋಳ್ಳಿ, ಅಂಬಲಮನೆ ಸುಬ್ರಹ್ಮಣ್ಯ, ಛಾಯಪತಿ, ಎಚ್.ಎ. ಪ್ರಕಾಶ್, ಪ್ರದೀಪ್ ಕೂಳೆಗದ್ದೆ, ಎಚ್.ಎಂ. ಮಂಜುನಾಥ ಗೌಡ, ಶ್ರೀಮಂದಾರ, ಜಗದೀಶ್ ಕಣದಮನೆ, ಸಂತೋಷ್ ಕಾಳ್ಯ, ರಾಜ್ ಕುಮಾರ್ ಹೆಗ್ಡೆ, ಪ್ರದೀಪ್ ಯಡದಾಳು, ಅವಿನಾಶ್ ಹೊಸಕೊಪ್ಪ, ರವೀಶ್ ಮೌಳಿ ಸೇರಿದಂತೆ ಕಲಾ ತಂಡದ ಮೋಹನ್ ಬೋಳೂರು, ತ್ರಿಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.
















