
ಎನ್.ಆರ್.ಪುರ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಸಾಗಣೆ ಹಾಗೂ ಮಾರಾಟ ನಡೆಸುತ್ತಿದ್ದ ಇಬ್ಬರು ಆರೋಪಿಗಳಿಗೆ ಘನ ನ್ಯಾಯಾಲಯವು 6 ತಿಂಗಳ ಕಠಿಣ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
ಇದನ್ನೂ ಓದಿ: ರೈತರ ಮಕ್ಕಳಿಗೆ ‘ರೈತ ವಿದ್ಯಾನಿಧಿ ಸ್ಕಾಲರ್ಶಿಪ್; 2,000 ದಿಂದ 11,000ದ ವರೆಗೆ ಸಿಗಲಿದೆ ವಿದ್ಯಾರ್ಥಿವೇತನ

ಫೆಬ್ರವರಿ 18, 2025ರಂದು ಮುತ್ತಿನಕೊಪ್ಪದಿಂದ ಲಕ್ಕಿನಕೊಪ್ಪಕ್ಕೆ ಹೋಗುವ ರಸ್ತೆಯಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಎನ್.ಆರ್.ಪುರ ಪೊಲೀಸ್ ತಂಡ ದಾಳಿ ನಡೆಸಿ, ದಾಳಿಯ ವೇಳೆ ಮೋಟಾರ್ ಸೈಕಲ್‌ನಲ್ಲಿ ಸಂಚರಿಸುತ್ತಿದ್ದ ಇಬ್ಬರನ್ನು ತಪಾಸಣೆ ನಡೆಸಿದಾಗ, ಅವರ ಬಳಿ ಸುಮಾರು 104 ಗ್ರಾಂ ಗಾಂಜಾ ಪತ್ತೆಯಾಗಿತ್ತು.

ಈ ಸಂಬಂಧ ಆರೋಪಿಗಳ ವಿರುದ್ಧ ಎನ್.ಆರ್.ಪುರ ಪೊಲೀಸ್ ಠಾಣಾ ಮೊ.ನಂ. 14/2025 ರಂತೆ ಎನ್‌ಡಿಪಿಎಸ್ ಕಾಯ್ದೆ 20(b)(ii)(A) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ವಿಚಾರಣೆ ಪೂರ್ಣಗೊಂಡ ಬಳಿಕ ಆರೋಪಿಗಳಾದ ಮಹಮ್ಮದ್ ಫತಾವುಲ್ಲ (38) ಹಾಗೂ ಪ್ರವೀಣ್ (25) ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಎನ್.ಆರ್.ಪುರ ಘನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯವು 06-01-2026 ರಂದು ತೀರ್ಪು ಪ್ರಕಟಿಸಿದೆ.
ಇದನ್ನೂ ಓದಿ: ಆಧಾರ್ ಸೇವಾ ಕೇಂದ್ರದಲ್ಲಿ ಜಾಬ್, ಅರ್ಜಿ ಆಹ್ವಾನ
ನ್ಯಾಯಾಲಯವು ಇಬ್ಬರು ಆರೋಪಿಗಳಿಗೆ ತಲಾ 6 ತಿಂಗಳ ಕಠಿಣ ಜೈಲು ಶಿಕ್ಷೆ ಹಾಗೂ ತಲಾ ರೂ.5,000 ದಂಡ ವಿಧಿಸಿದೆ. ಜೊತೆಗೆ, ಅಪರಾಧಕ್ಕೆ ಬಳಸಿದ ಮೋಟಾರ್ ಸೈಕಲ್ ಅನ್ನು ಸರ್ಕಾರದ ಪಾಲಿಗೆ ಮುಟ್ಟುಗೋಲು ಹಾಕಿಕೊಳ್ಳಲು ಹಾಗೂ ವಶಪಡಿಸಿಕೊಂಡ ಗಾಂಜಾವನ್ನು ಕಾನೂನುಬದ್ಧವಾಗಿ ವಿಲೇವಾರಿ ಮಾಡಲು ಆದೇಶಿಸಿದೆ.
ಈ ಪ್ರಕರಣದ ದಾಳಿಯನ್ನು PSI ನಿರಂಜನ್ ಗೌಡ ಬಿ.ಎಸ್ ಅವರು ನಡೆಸಿದ್ದು, ಪ್ರಕರಣದ ತನಿಖೆಯನ್ನು PSI ಜೋತಿ ಎನ್.ಎ ಅವರು ಕೈಗೊಂಡು ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಗದಿಗೆಪ್ಪ ಜಿ. ನೆಕರ್ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.
ಪೊಲೀಸ್ ಸಿಬ್ಬಂದಿಗಳಾದ CPC ಆಸೀಫ್ ಎನ್.ಯು ಅವರು ನ್ಯಾಯಾಲಯ ಕರ್ತವ್ಯ, CHC ಪಕಮೇಶ ಹಾಗೂ CPC ನವೀನ್ ಅವರು ತನಿಖಾ ಸಹಾಯಕರಾಗಿ ಮತ್ತು CHC ಸೋಮೇಶ ಅವರು ಪೋಸೆಸ್ ಕರ್ತವ್ಯ ನಿರ್ವಹಿಸಿದ್ದಾರೆ.













