ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ–ಚಿಕ್ಕಮಗಳೂರು–ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿರುವ ಮೆಣಸೆ ಗ್ರಾಮದ ತುಂಗಾ ಸೇತುವೆ ಶಿಥಿಲಾವಸ್ಥೆಗೆ ತಲುಪಿದ್ದು, ತಕ್ಷಣ ದುರಸ್ತಿ ಕಾಮಗಾರಿ ಕೈಗೊಳ್ಳದಿದ್ದರೆ ಭವಿಷ್ಯದಲ್ಲಿ ದೊಡ್ಡ ಅನಾಹುತ ಸಂಭವಿಸುವ ಆತಂಕ ವ್ಯಕ್ತವಾಗಿದೆ. ಹಲವು ವರ್ಷಗಳಿಂದ ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಸೇತುವೆಯ ವಿವಿಧ ಭಾಗಗಳು ಹಾನಿಗೊಳಗಾಗಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಜೀವಭಯದಲ್ಲೇ ಸಂಚರಿಸುವಂತಾಗಿದೆ.
ಶೃಂಗೇರಿಯನ್ನು ಸಂಪರ್ಕಿಸುವ ಪ್ರಮುಖ ಸೇತುವೆಯಾಗಿರುವ ಈ ಮಾರ್ಗದಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಹಾಗೂ ಸಾರ್ವಜನಿಕರು ಸಂಚರಿಸುತ್ತಾರೆ. ವಾಹನಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೇತುವೆಯ ಮೇಲೆ ಹೆಚ್ಚಿನ ಒತ್ತಡ ಉಂಟಾಗಿದೆ. ಆದರೆ ಲೋಕೋಪಯೋಗಿ ಇಲಾಖೆ ಅಗತ್ಯ ನಿರ್ವಹಣೆ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸೇತುವೆಯ ತಳಭಾಗಕ್ಕೂ ಹಾನಿ:
ಮಳೆಗಾಲದಲ್ಲಿ ತುಂಗಾ ನದಿಯಲ್ಲಿ ಭಾರಿ ಪ್ರಮಾಣದ ನೀರು ಹರಿಯುವುದರಿಂದ ಸೇತುವೆಯ ಅಡಿಭಾಗಕ್ಕೆ ನಿರಂತರ ಹೊಡೆತ ಬೀಳುತ್ತಿದೆ. ನದಿಯ ಮಧ್ಯಭಾಗದಲ್ಲಿ ಮಣ್ಣಿನ ದಿಬ್ಬ ನಿರ್ಮಾಣವಾಗಿರುವುದು ಹಾಗೂ ನದಿಪಾತ್ರದಲ್ಲಿ ಜಂಗಲ್ ಮತ್ತು ಬಿದಿರು ಬೆಳೆದಿರುವುದರಿಂದ ನೀರಿನ ಹರಿವು ಅಡ್ಡಿಯಾಗುತ್ತಿದೆ. ಇದರ ಪರಿಣಾಮವಾಗಿ ಸೇತುವೆಯ ತಳಭಾಗದಲ್ಲಿ ಮರಗಳ ಬೇರುಗಳು ಬೆಳೆದು ಕಾಂಕ್ರೀಟ್ ಭಾಗಗಳಿಗೆ ಹಾನಿ ಉಂಟುಮಾಡುತ್ತಿವೆ.

ಸೇತುವೆಯ ಕೆಲ ಪಿಲ್ಲರ್‌ಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕೆಲವು ಭಾಗಗಳಲ್ಲಿ ಸುಮಾರು ಐದರಿಂದ ಆರು ಇಂಚಿನಷ್ಟು ಕುಸಿತ ಕಂಡುಬಂದಿದೆ ಎನ್ನಲಾಗಿದೆ. ಇದರಿಂದ ಸೇತುವೆಯ ಸುರಕ್ಷತೆ ಕುರಿತು ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.
ಮಳೆಗಾಲದಲ್ಲಿ ಮತ್ತಷ್ಟು ಸಮಸ್ಯೆ:
ಸೇತುವೆಯಿಂದ ಸುಮಾರು 300–400 ಮೀಟರ್ ದೂರದಲ್ಲಿರುವ ರಸ್ತೆಯ ಕೆಲವು ಭಾಗಗಳು ಎತ್ತರದಲ್ಲಿರುವುದರಿಂದ ಮಳೆ ನೀರು ಸರಿಯಾಗಿ ಚರಂಡಿಗೆ ಹರಿಯದೆ ನೇರವಾಗಿ ಸೇತುವೆಯ ಮೇಲೆ ಹರಿಯುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದ್ದು, ಅಪಘಾತದ ಭೀತಿ ಎದುರಾಗಿದೆ.
ಈ ಹಿಂದೆ ₹3 ಕೋಟಿ ಕಾಮಗಾರಿಗೆ ಪ್ರಸ್ತಾವನೆ:
ಮೆಣಸೆ ಗ್ರಾಮದ ನಿವಾಸಿಯೊಬ್ಬರು ಕೇಂದ್ರ ಸರ್ಕಾರದ CPGRAMS ಪೋರ್ಟಲ್ ಮೂಲಕ ತುಂಗಾ ನದಿ ದಡದಲ್ಲಿ ಪ್ರವಾಹದಿಂದ ಉಂಟಾಗುತ್ತಿರುವ ದಡ ಕೊರೆತ ಹಾಗೂ ಜಮೀನು ಹಾನಿ ತಡೆಗಟ್ಟುವಂತೆ ದೂರು ಸಲ್ಲಿಸಿದ್ರು. ಈ ದೂರಿನ ಅನ್ವಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಈ ದಡ ಕೊರೆತಕ್ಕೆ ನದಿ ಪಾತ್ರದಲ್ಲಿ ಬೆಳೆದಿರುವ ಜಂಗಲ್ ಮತ್ತು ಗಿಡಗಂಟಿಗಳಿಂದ ಇದನ್ನು ತೆರವುಗೊಳಿಸಿದಾಗ ನೀರು ಸರಾಗವಾಗಿ ಹರಿದು ದಡ ಕೊರೆತ ಉಂಟಾಗುವುದನ್ನ ತಡೆಗಟ್ಟಬಹುದು ಎಂದು ತಿಳಿಸಿದೆ. ಅಲ್ಲದೆ ಈ ಕುರಿತು ಅನಿರುದ್ಧ ಅವರು ಜನಸ್ಪಂದನ ಪೋರ್ಟಲ್‌ನಲ್ಲೂ ಅರ್ಜಿ ಸಲ್ಲಿಸಲಾಗಿದ್ದು, ಆಗ ಇಲಾಖೆಯು ಪರಿಶೀಲನೆ ನಡೆಸಿ ಹಾನಿಗೊಳಗಾದ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸಲು ಅಂದಾಜು ₹300 ಲಕ್ಷ (₹3 ಕೋಟಿ) ವೆಚ್ಚದ ರೇಖಾ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ ನಿಗಮ ಕಚೇರಿಗೆ ಅನುದಾನಕ್ಕಾಗಿ ಕಳುಹಿಸಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಪ್ರಸ್ತುತ CPGRAMS ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತೊಮ್ಮೆ ವರದಿ ಸಿದ್ಧಪಡಿಸಿ, ಹಿಂದಿನ ಪ್ರಸ್ತಾವನೆಯ ವಿವರಗಳೊಂದಿಗೆ ಮೇಲಾಧಿಕಾರಿಗಳ ಗಮನಕ್ಕೆ ಸಲ್ಲಿಸಿದ್ದು, ಅನುದಾನ ಮಂಜೂರಾತಿ ಮತ್ತು ಮುಂದಿನ ಕ್ರಮಕ್ಕಾಗಿ ಕಳುಹಿಸಲಾಗಿದೆ.
ಸಾರ್ವಜನಿಕರು ತುಂಗಾ ನದಿ ದಡ ಕುಸಿತ ಸಮಸ್ಯೆಗೆ ಶೀಘ್ರ ಶಾಶ್ವತ ಪರಿಹಾರ ಕಲ್ಪಿಸಿ ಆದಷ್ಟು ಬೇಗ ದುರಸ್ತಿ ಕಾಮಗಾರಿ ಆರಂಭಿಸಬೇಕೆಂದು ಆಗ್ರಹಿಸಿದ್ದಾರೆ.














