ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಅರಣ್ಯ ಇಲಾಖಾ ಕಾನೂನುಗಳು ಜನರ ಬದುಕನ್ನೆ ಕಸಿದುಕೊಳ್ಳುತ್ತಿದ್ದು ಇಲ್ಲಿ ಜೀವನ ನಡೆಸುವುದೇ ದುಸ್ತರವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಇದನ್ನೂ ಓದಿ; ವಾಹನ ಖರೀದಿಸಲು ಸಬ್ಸಿಡಿ; ಆಧಾರ್ ಕಾರ್ಡ್ ಇದ್ರೆ ಈ ರೀತಿ ಅರ್ಜಿ ಸಲ್ಲಿಸಿ

ಮಲೆನಾಡಿನ ಭಾಗದಲ್ಲಿ ರೈತರು ಮತ್ತು ನಾಗರಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ರಕ್ಷಣೆ, ಅರಣ್ಯ ರಕ್ಷಣೆಯನ್ನು ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ಅರಣ್ಯ ಉಳಿದುಕೊಂಡಿದೆ ಎಂದರೆ ಅದಕ್ಕೆ ರೈತರ ಹಾಗೂ ಸಾರ್ವಜನಿಕರ ಕಾಳಜಿ ಕಾರಣವಾಗಿದೆ. ಸರ್ಕಾರದ ಕಾಳಜಿ ಕಾಡಿನ ಮಧ್ಯದಲ್ಲಿ ವಾಸಿಸುತ್ತಿರುವ ಜನರಿಗಿಂತ ಕಾಡಿನ ಬಗ್ಗೆಯೇ ಇದ್ದಂತೆ ಕಾಣುತ್ತದೆ. ಜನರಿಗೆ ಮಾರಕವಾಗಿರುವ ಕಾನೂನು ಏಕೆ ಬೇಕು ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.
ಇದಕ್ಕೆ ತಾಜಾ ಉದಾಹರಣೆ ತಾಲ್ಲೂಕಿನ ಕೆಳಕೊಪ್ಪ ಗ್ರಾಮದ ಬಿ ಎಮ್ ಸುಬ್ರಮಣ್ಯರವರು ತಮ್ಮ ಹಿಡುವಳಿ ಜಮೀನು ಸರ್ವೆ ನಂ. 98/2ರಲ್ಲಿ 10 ಗುಂಟೆ ವಿಸ್ತೀರ್ಣದ ಪೈಕಿ ಹಾಲಿ ಮನೆ 2 ಗುಂಟೆ ವಿಸ್ತೀರ್ಣವನ್ನು ವಸತಿ ಉದ್ಧೇಶಕ್ಕೆ ಭೂ ಪರಿವರ್ತನೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅರಣ್ಯ ಇಲಾಖೆಯು ನಿಮ್ಮ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂಬ ಹಿಂಬರಹ ನೀಡಿದೆ. ಇದು ಯಾವ ರೀತಿಯ ಕಾನೂನು ತಮ್ಮ ಸ್ವಂತ ಹಿಡುವಳಿ ಜಾಗದಲ್ಲಿ ಮನೆ ನಿರ್ಮಿಸಲು ಅರ್ಜಿ ಸಲ್ಲಿಸಿದರೆ ಅರಣ್ಯ ಇಲಾಖೆಯಿಂದ ತಿರಸ್ಕೃತವಾಗಿರುವುದು ಆಶ್ಚರ್ಯ ತಂದಿದೆ. ಅರಣ್ಯ ಇಲಾಖೆಯ ಯಾವ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ.
ಬಿ ಎಂ ಸುಬ್ರಮಣ್ಯರವರು ಕೆಳಕೊಪ್ಪ ಗ್ರಾಮದಲ್ಲಿ ಅಕ್ರಮವಾಗಿ ಯಾವುದೇ ಜಾಗವನ್ನು ಹೊಂದಿಲ್ಲ 10 ಗುಂಟೆ ತಮ್ಮದೇ ಜಮೀನಿನಲ್ಲಿಯೇ 2 ಗುಂಟೆ ಜಾಗದಲ್ಲಿ ವಸತಿ ಉದ್ಧೇಶಕ್ಕಾಗಿ ಭೂ ಪರಿವರ್ತನೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಅರಣ್ಯ ಇಲಾಖಾ ಕಾನೂನು ತೊಡಕಾಗಿರುವುದು ನಾಗರಿಕರ ಹಕ್ಕುಗಳಿಗೆ ವಿರುದ್ಧವಾದ ಕ್ರಮವಾಗಿದೆ ಎಂಬ ಅಭಿಪ್ರಾಯ ಎಲ್ಲೆಡೆ ಕೇಳಿ ಬರುತ್ತಿದೆ.
ಇದನ್ನೂ ಓದಿ; ರಾಜ್ಯ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್; ಈ ದಿನ ಬೆಳೆ ನಷ್ಟ ಪರಿಹಾರ ಖಾತೆಗೆ ಜಮಾ!
ಮನೆ ನಿರ್ಮಿಸಿಕೊಳ್ಳಲು ಬದಲಿ ಜಾಗದ ವ್ಯವಸ್ಥೆ ಇಲ್ಲದೆ ಇರುವುದರಿಂದ ಅನಿವಾರ್ಯವಾಗಿ ರೈತರು ತಮ್ಮ ಜಮೀನಿನಲ್ಲಿಯೇ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗದೆ ಇರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
ರೈತರ ತಮ್ಮ ಹಿಡುವಳಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡರೆ ಅರಣ್ಯ ಇಲಾಖೆ ಏಕೆ ತಗಾದೆ ತೆಗೆಯುತ್ತಿದೆ. ಸರ್ಕಾರ ಮೊದಲು ಕಂದಾಯ ಇಲಾಖಾ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳಲು ಅನುಮತಿ ನೀಡಲಿ ವಿನಃ ಕಾರಣ ರೈತರು ತಮ್ಮ ಸ್ವಂತ ಜಾಗದಲ್ಲಿ ವಸತಿ ನಿರ್ಮಿಸಿಕೊಳ್ಳಲು ಮುಂದಾದರೆ ಇದಕ್ಕೆ ಇಲಾಖೆ ತೊಂದರೆ ನೀಡುವುದು ಎಷ್ಟರ ಮಟ್ಟಿಗೆ ಸರಿ. – ಕಾನುವಳ್ಳಿ ಚಂದ್ರಶೇಖರ್, ಅಧ್ಯಕ್ಷರು ತಾಲ್ಲುಕು ರೈತ ಸಂಘ.
ಮಲೆನಾಡಿನಲ್ಲಿ ಜನ ಜೀವನೋಪಾಯಕ್ಕಾಗಿ ತಮ್ಮ ಹಿಡುವಳಿ ಜಾಗದಲ್ಲಿ ಮನೆಕಟ್ಟಿಕೊಂಡು ಬದುಕುತ್ತಿದ್ದಾರೆ. ತಲೆತಲಾಂತರದಿಂದ ಈ ರೀತಿಯ ಬದುಕು ಸಾಗಿದೆ. ಸಣ್ಣ ಮನೆ, ದನ ಕರು ಸಾಕಲು ಕೊಟ್ಟಿಗೆ, ಜಾಗವಿದ್ದರೆ ಸೌದೆ ಸಂಗ್ರಹ ಹಾಗೂ ದನಗಳ ಮೇವಿನ ಹುಲ್ಲು ಸಂಗ್ರಹಿಸಿಡಲು ಸಣ್ಣ ಕೊಟ್ಟಿಗೆ ಆದರೆ ಈ ರೀತಿ ಮನೆಗಳಿಗೆ ಯಾವುದೇ ರೀತಿಯ ಹಕ್ಕು ಪತ್ರವಿಲ್ಲ.
ಸರ್ಕಾರ ಸಮಸ್ಯೆ ಬಗೆಹರಿಸಲು ಭೂಕಂದಾಯ ಕಾಯ್ದೆಗೆ ಈ ಹಿಂದೆ ತಿದ್ದುಪಡಿ ತಂದಿದ್ದರೂ ಅರಣ್ಯ ಇಲಾಖೆ ಮಾತ್ರ ವಿನಃ ಕಾರಣ ರೈತರಿಗೆ ಕಿರುಕುಳ ನೀಡುವುದು ಮಾಮೂಲಿಯಾಗಿದೆ. ಸರ್ಕಾರ ಮಲೆನಾಡಿನ ನಾಗರೀಕ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕು ಕೂಡಲೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಹಾಗೂ ನಾಗರೀಕರ ಒತ್ತಾಯವಾಗಿದೆ.
ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ರೇಟ್ ಹೇಗಿದೆ?; ಏರಿಕೆಯಾಗಿದೆಯಾ? ಅಥವಾ ಇಳಿಕೆನಾ?
ವಸತಿ ಉದ್ದೇಶಕ್ಕೆ ಭೂ ಪರಿವರ್ತನೆ ಕೋರಿ ಅರ್ಜಿ ಸಲ್ಲಿಸಿದರೆ ಇದಕ್ಕೆ ಅರಣ್ಯ ಇಲಾಖೆ ತಕರಾರು ತೆಗೆದಿರುವುದು ಸರಿಯಲ್ಲ ಇಲ್ಲದೆ ಹೋದರೆ ಸರ್ಕಾರ ಬದಲಿ ವ್ಯವಸ್ಥೆ ಮಾಡಿಕೊಡಲಿ ಯಾವ ನಿಯಮ ಉಲ್ಲಂಘಿಸಿ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂಬುದನ್ನು ಇಲಾಖೆ ಹಿಂಬರಹ ನೀಡಲಿ – ಪಿ. ಬಿ ಶ್ರೀನಿವಾಸ್ ಮಲೆನಾಡು ನಾಗರೀಕ ಹೋರಾಟ ಸಮಿತಿ ಶೃಂಗೇರಿ.












