ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ವತಿಯಿಂದ ಎರಡೂ ಪಕ್ಷದ ಅಭ್ಯರ್ಥಿಗಳಿಗೆ ಮಲೆನಾಡಿನ ಗಂಭೀರ ಸಮಸ್ಯೆಗಳ ಕುರಿತು ಮನವಿ ಸಲ್ಲಿಕೆಯನ್ನು ಮಾಡಿದ್ದು, ಮುಂದಿನ ಎರಡು ವರ್ಷದೊಳಗೆ ಅನುಷ್ಟಾನಕ್ಕೆ ಬರುವಂತೆ ಮನವಿ ಪತ್ರದಲ್ಲಿ ವಿನಂತಿಸಿದ್ದಾರೆ.

ಮಲೆನಾಡಿನ ಸಮಸ್ಯೆಗಳಾದ ಕಾಡು ಪ್ರಾಣಿಗಳ ದಾಳಿ, ಸೆಕ್ಷನ್ 4, ಡೀಮ್ಡ್ ಫಾರೆಸ್ಟ್, ಸಾಗುವಳಿ ಚೀಟಿ, ಹಕ್ಕುಪತ್ರ, ಕೃಷಿ ಸಂಬಂಧಿತ ರೋಗಗಳು, ನೂರು ಬೆಡ್ ಆಸ್ಪತ್ರೆ ಸೇರಿದಂತೆ ಹಲವು ಸಮಸ್ಯೆಗಳನ್ನು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಮನವಿ ಪತ್ರದಲ್ಲಿ ಏನಿದೆ?;
1) ಬಿಫೋರ್ 78, ಪಾರಂಪರಿಕ ಅರಣ್ಯ ಹಕ್ಕು ಫಾರಂ ನಂಬರ್ 50, 53, 57.ಮತ್ತು ನಿವೇಶನಕ್ಕೆ ವಾಸದ ಮನೆಗೆ ಹಾಕಿದ 94ಸಿ, 94 ಸಿಸಿ ಅರ್ಜಿಗಳು ಇನ್ನೂ ಸಮರ್ಪಕವಾದ ರೀತಿಯಲ್ಲಿ ಅಂದರೆ ಹಕ್ಕು ಪತ್ರಗಳಾಗಿ ಫಲಾನುಭವಿಗಳ ಕೈಗೆ ಸಿಕ್ಕಿಲ್ಲ. ಪಹಣಿ ಸಿಕ್ಕವರಿಗೆ ಪಟ್ಟ ಪೊಡಿ ಆಗಿಲ್ಲ. ಇದನ್ನು ತಕ್ಷಣ ಬಗೆ ಹರಿಸಬೇಕು. ಅರಣ್ಯ ಕಾಯ್ದೆಗಳಿಂದ ಜನರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೂ ತೊಂದರೆ ಆಗಿದೆ.
ಎ). ಶೃಂಗೇರಿಯಿಂದ ಮಂಗಳೂರು ಸಂಪರ್ಕಿಸುವ ಕೆರೆಕಟ್ಟೆ ರಸ್ತೆ ಅಗಲೀಕರಣಕ್ಕೆ ಅರಣ್ಯ ಇಲಾಖೆ ತಡೆಯುಂಟು ಮಾಡುತ್ತಿದ್ದು, ಹತ್ತಾರು ವರ್ಷಗಳಿಂದ ರಸ್ತೆ ಅಭಿವೃದ್ಧಿ ಸಾಧ್ಯವಾಗಿಲ್ಲ. ದಿನನಿತ್ಯ ಸಾವಿರಾರು ಪ್ರಯಾಣಿಕರು ಆಸ್ಪತ್ರೆಗೆ ಹಾಗೂ ಉದ್ಯೋಗಕ್ಕೆ ಪ್ರಯಾಣಿಸುತ್ತಾರೆ. ಕಡಿದಾದ ರಸ್ತೆಯಿಂದ ನಿರಂತರ ರಸ್ತೆ ಅಪಘಾತಗಳು ಸಂಭವಿಸುತ್ತಿವೆ.
ಬಿ). ಶೃಂಗೇರಿ ಸುತ್ತಮುತ್ತ ಯಾವುದೇ ಸುಸಜ್ಜಿತ ಆಸ್ಪತ್ರೆ ಇಲ್ಲದ ಕಾರಣ ನೂರು ಬೆಡ್ ಆಸ್ಪತ್ರೆ ಮಂಜೂರು ಮಾಡಲಾಗಿದ್ದರೂ, ಅರಣ್ಯ ಇಲಾಖೆಯ ಹಸ್ತಕ್ಷೇಪದಿಂದ ಇದುವರೆಗೂ ಜಾಗ ಮಂಜೂರಾತಿ ಸಾಧ್ಯವಾಗಿಲ್ಲ.
ಸಿ) ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಸಂತ್ರಸ್ತರಿಗೆ ಇನ್ನೂ ಸರಿಯಾದ ಪರಿಹಾರ ಸಿಕ್ಕಿಲ್ಲ.ಅಲ್ಲಿ ವಾಸವಾಗಿರುವ ಜನರನ್ನು ಶತ್ರುಗಳಂತೆ ನೋಡುವ ಪರಿಪಾಠ ಅರಣ್ಯ ಇಲಾಖೆ ಮಾಡಿಕೊಂಡಿದೆ.
ಡಿ) ಕಸ್ತೂರಿ ರಂಗನ್ ವರದಿ, ಪರಿಸರ ಸೂಕ್ಷ್ಮ ವಲಯದ ವಿಚಾರದಲ್ಲಿ ಗ್ರಾಮ ಮಟ್ಟದಲ್ಲಿ ಸಭೆ ನಡೆಸಿ, ವರದಿ ತಯಾರಿಸಬೇಕು. ಈಗ ಸಿದ್ಧವಾಗಿರುವ ವರದಿ ಕೈ ಬಿಡಬೇಕು.
ಇ) ಮಲೆನಾಡಿನ ಪರಿಸರ ಸಂಬಂಧಿತ ಹೋರಾಟಗಳಲ್ಲಿ ಹೊರಗಿನ ಎನ್.ಜಿ.ಒಗಳ ಹಸ್ತಕ್ಷೇಪ ಲಾಭಿ ಅವ್ಯಾಹತವಾಗಿ ನಡೆಯುತ್ತಿದ್ದು, ಇದು ಮಲೆನಾಡಿಗಾರನ್ನು ಭೂ ಕಳ್ಳರ ರೀತಿ ನೋಡುವಂತೆ ಆಗಿದೆ. ಇದಕ್ಕೆ ತಡೆ ಹಿಡಿಯಬೇಕು.
ಇದನ್ನೂ ಓದಿ: ಉದ್ಯೋಗಕ್ಕಾಗಿ ನೀಡುವ ರೆಸ್ಯೂಮ್ ಈ ಕಾರಣಗಳಿಂದ ರಿಜೆಕ್ಟ್ ಆಗಬಹುದು.. ಎಚ್ಚರ!; ಜಾಬ್‌ಗೆ ಶಾರ್ಟ್ ಲಿಸ್ಟ್ ಆಗದಿರಲು ಸಾಮಾನ್ಯ ಕಾರಣಗಳೇನು?; ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ
2). ಮಲೆನಾಡಿನಲ್ಲಿ ಡೀಮ್ಸ್ ಫಾರೆಸ್ಟ್ ಎಂದು ಸಾವಿರಾರು ಎಕರೆ ಭೂಮಿಯನ್ನು ಗುರುತಿಸಿ ಅರಣ್ಯ ಇಲಾಖೆ ಅದನ್ನು ಸುಪರ್ದಿಗೆ ತೆಗೆದುಕೊಂಡಿದೆ, ಹೈಕೋರ್ಟ್ ಸಹ ಡೀಮ್ಸ್ ಫಾರೆನ್ಸ್ ಕಲ್ಪನೆಯೇ ಇಲ್ಲ ಎಂದರೂ ಅರಣ್ಯ ಇಲಾಖೆ ಹಸ್ತಕ್ಷೇಪ నిల్లుತ್ತಿಲ್ಲ. ಹಾಗೆಯೇ ಅರಣ್ಯ ಭೂಮಿ ಎಂದು ಅವೈಜ್ಞಾನಿಕವಾಗಿ ತನ್ನ ಹಿಡಿತ ಸಾಧಿಸುತ್ತಿದೆ.
3) ಇಂದಿಗೂ ಸರಿಯಾದ ಸಮರ್ಪಕ ಸರ್ವೇ ಆಗದೆ, ಸಾಗುವಳಿ ಭೂಮಿ ಹಾಗೂ ವಾಸದ ಮನೆಗೆ ಅರಣ್ಯ ಇಲಾಖೆಯ ಒಪ್ಪಿಗೆ ಪತ್ರ ಸಿಗುತ್ತಿಲ್ಲ.ಹಾಗಾಗಿ ಈಗಾಗಲೇ ಸಾಗುವಳಿ ಮಾಡುತ್ತಿರುವ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಬೇಕು.
4) ಮಲೆನಾಡಿನಲ್ಲಿ ಅದರಲ್ಲೂ ಶೃಂಗೇರಿ ಕೊಪ್ಪ ಭಾಗದಲ್ಲಿ ಅಡಿಕೆಗೆ ಭಾದಿಸುತ್ತಿರುವ ಹಳದಿ ರೋಗಕ್ಕೆ ಈ ವರೆಗೆ ಸರಕಾರ ಕೈಗೊಂಡ ಕ್ರಮಗಳು ಆದೇಶಕ್ಕೆ ಮಾತ್ರ ಸೀಮಿತವಾಗಿದೆ. ಹಾಗಾಗಿ ಅದನ್ನು ಸೂಕ್ತ ರೀತಿಯಲ್ಲಿ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಸಮಸ್ಯೆ ಬಗೆ ಹರಿಸಬೇಕು.
5) ಸೆಕ್ಷನ್ 4 ರ ಮೀಸಲು ಅರಣ್ಯ ಗೊಂದಲ. ಅದಕ್ಕೆ ಸೆಟಲೈಂಟ್ ಆಫೀಸರ್ ನೇಮಕ ಆಗಿ ಎರಡು ವರ್ಷ ಆದರೂ ಅವರು ಸ್ಥಳ ಪರಿಶೀಲನೆಗೆ ಬಂದಿಲ್ಲ. ಇದು ಕೂತಲ್ಲೇ ವ್ಯವಹಾರ ಎಂಬುವಂತೆ ಆಗಿದೆ. ಹಾಗಾಗಿ ಭ್ರಷ್ಟಾಚಾರ ಮುಕ್ತವಾಗಿ ಮೀಸಲು ಅರಣ್ಯದ ಸಮಸ್ಯೆ ತುರ್ತಾಗಿ ಪರಿಹಾರ ಮಾಡಬೇಕು. ಇದಕ್ಕೆ ಮಲೆನಾಡಿನ ರೈತರನ್ನು ಒಳಗೊಂಡಂತೆ ಅರಣ್ಯ ಇಲಾಖೆ, ಕಂದಾಯ ಇಲಾಖೆ ಜನಪ್ರತಿನಿಧಿಗಳ ಒಂದು ಸಮಿತಿ ರಚನೆ ಮಾಡಿ ರೈತರಿಗೆ ಅನುಕೂಲ ಮಾಡಬೇಕು.
6) ಭದ್ರ ಹುಲಿ ಯೋಜನೆಯ ಬಫರ್ ಝನ್ ಯೋಜನೆಯನ್ನು ಪುನರ್ ಪರಿಶೀಲನೆ ಮಾಡಬೇಕು, ಸಾಗುವಳಿ ಹಾಗೂ ಕಂದಾಯ ಭೂಮಿಯನ್ನು ಇದರಿಂದ ಹೊರಗೆ ಇಡಬೇಕು.
ಇದನ್ನೂ ಓದಿ: ರೈತರಿಗೆ ಗುಡ್ ನ್ಯೂಸ್; ವಿವಿಧ ಯೋಜನೆಗಳಡಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನ; ಯಾವೆಲ್ಲಾ ಯೋಜನೆಗಳಿಗೆ, ಇಲ್ಲಿದೆ ಡಿಟೈಲ್ಸ್
7) ಮಾನವ ಹಾಗೂ ವನ್ಯಜೀವಿ ಸಂಘರ್ಷ ತಪ್ಪಿಸಲು. ಹುಲಿ ಯೋಜನೆಯ ಕೋರ್ ಭೂಮಿಯ ಸರ ಹದ್ದಿಗೆ ರೈಲ್ವೆ ಕಂಬಿಗಳ ಬೇಲಿ ಮಾಡಿ, ಆನೆ ಹಾಗೂ ಕಾಡುಕೋಣಗಳ ದಾಳಿ ಆಗದಂತೆ ಕ್ರಮ ವಹಿಸಬೇಕು.
8 ಅಭಯಾರಣ್ಯದ ವ್ಯಾಪ್ತಿಯಲ್ಲಿ ವನ್ಯ ಪ್ರಾಣಿಗಳಿಗೆ ಸಾಕಷ್ಟು ನೈಸರ್ಗಿಕ ಹುಲ್ಲು, ಬಿದಿರು, ಹಣ್ಣಿನ ಗಿಡಗಳು, ಆಹಾರ ಜೊತೆಗೆ ಕುಡಿಯುವ ನೀರು ಸಿಗುವಂತೆ ವ್ಯವಸ್ಥೆ ಮಾಡಬೇಕು. ಇದರಿಂದ ವನ್ಯ ಜೀವಿ ಹಾಗೂ ಮಾನವ ಸಂಘರ್ಷ ಕ್ರಮೇಣ ಕಡಿಮೆ ಆಗುತ್ತದೆ.
9) ಮಲೆನಾಡಿನ ಸುಮಾರು ಹಳ್ಳಿಗಳಲ್ಲಿ ಅರಣ್ಯ ಭೂಮಿಯಿಂದ ಕಂದಾಯ ಭೂಮಿಗೆ ವರ್ಗಾವಣೆ ಆಗಿರುವ ಭೂಮಿಯ ಕಡತಗಳು ಕಾಣೆ ಆಗಿವೆ.ಇದಲ್ಲದೆ 94, ಸಿ 50, 53, 57, ಅಡಿಯಲ್ಲಿ ಅರ್ಜಿ ಸಲ್ಲಿಸಿದ ರೈತರ ಅರ್ಜಿಗಳ ಕಾಣೆಯಾಗಿದೆ. ಅದನ್ನು ಸಮರ್ಪಕವಾಗಿ ಜಾರಿಗೆ ಬರುವಂತೆ ಆಗಿ ರೈತರಿಗೆ ಅನುಕೂಲ ಮಾಡಿಕೊಡಬೇಕು.
10) ಭದ್ರ ಡ್ಯಾಂ ಯೋಜನೆ ಹಾಗೂ ಹಿನ್ನೀರಿನಿಂದ ಜಮೀನು ಕಳೆದು ಕೊಂಡ ರೈತರಿಗೆ ಇನ್ನೂ ಸರಿಯಾದ ಪರಿಹಾರ ಪಹಣಿ ಪಟ್ಟ ಸಿಕ್ಕಿಲ್ಲ ಅದನ್ನು ದೊರಕಿಸಿ ಕೊಡಬೇಕು.
ಇದನ್ನೂ ಓದಿ: ಕೇಂದ್ರ ಲೋಕಸೇವಾ ಆಯೋಗದಲ್ಲಿ ಬಂಪರ್ ಜಾಬ್ ಆಫರ್; ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
11) ಮಲೆನಾಡಿನ ಅರಣ್ಯ ಇಲಾಖೆ ಸಣ್ಣ ಪುಟ್ಟ ರೈತರನ್ನು ನಾಗರಿಕರನ್ನು ಸಾಕಷ್ಟು ಕಾರಣಕ್ಕೆ ಪೀಡಿಸುವ ಬೆದರಿಸುವ ಕೆಲಸ ಮಾಡುತಿದೆ. ಹಾಗಾಗಿ ರೈತ ಸ್ನೇಹಿ ಅರಣ್ಯ ಇಲಾಖೆಯಾಗಿ ರೂಪುಗೊಳ್ಳಬೇಕು.
12) ಮಲೆನಾಡು ಕರ್ನಾಟಕದ ವಿವಿಧ ಭಾಗಕ್ಕೆ ವರದಾನ ಹಾಗಾಗಿ ಮಲೆನಾಡಿನ ಭಾಗವನ್ನು ವಿಶೇಷ ಆದ್ಯತಾ ವಲಯ ಎಂದು ಗುರುತಿಸಿ. ಶಿಕ್ಷಣ, ಆರೋಗ್ಯ, ರಸ್ತೆ ಮುಂತಾದ ಸುಸ್ಥಿರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು.
13) ವಲಸೆ ನೀತಿ ಜಾರಿ, ಮಲೆನಾಡಿಗರು ಅಲ್ಲದ ಬೇರೆ ಕಡೆಯಿಂದ ಇಲ್ಲಿ ಬಂದು ಭೂಮಿ ಕೊಳ್ಳುವ ಮಾರುವ ಪ್ರಕ್ರಿಯೆಗೆ ವಿರಾಮ ಹಾಕಬೇಕು. ಇಲ್ಲೇ ಹುಟ್ಟಿ ಬೆಳದು ವಾಸವಾಗಿರುವ ವ್ಯಕ್ತಿಗಳಿಗೆ ಮಾತ್ರ ಇಲ್ಲಿನ ಭೂಮಿಯ ಹಕ್ಕು ನೀಡುವಂತೆ ಆಗಬೇಕು.
14) ಇಲ್ಲಿನ ಆದಿವಾಸಿಗಳಿಗೆ, ಮೀನುಗಾರರಿಗೆ, ಕೃಷಿಕರಿಗೆ, ಕೃಷಿ ಸಂಬಂಧಿತ ವ್ಯವಹಾರ ನೆಡೆಸುವರಿಗೆ ಅನುಕೂಲ ಮಾಡಿ ಕೊಡಬೇಕು ಎಂದು ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ವತಿಯಿಂದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಮಲೆನಾಡಿನ ಗಂಭೀರ ಸಮಸ್ಯೆಗಳ ಕುರಿತು ಮನವಿ ಸಲ್ಲಿಕೆಯನ್ನು ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿಯ ಕ್ಷೇತ್ರ ಅಧ್ಯಕ್ಷರಾದ M.N ನಾಗೇಶ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಮಹಿಳೆಯರೇ ನೀವೂ ಉದ್ಯಮಿಗಳಾಗಿ; ಸಿಗಲಿದೆ 3 ಲಕ್ಷ ರೂ. ವರೆಗೆ ಬಡ್ಡಿರಹಿತ ಸಾಲ!; ಈ ದಾಖಲೆಗಳಿದ್ರೆ ಇಂದೇ ಅರ್ಜಿ ಸಲ್ಲಿಸಿ













