
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ತಂದೆಯಿಂದಲೇ ಮಗನ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಆನೆಗುಂಡಿ ಗ್ರಾಮದಲ್ಲಿ ನಡೆದಿದೆ. ಪ್ರದೀಪ್ ಆಚಾರ್ ಕೊಲೆಯಾದ ವ್ಯಕ್ತಿ. ಕೊಲೆ ಆರೋಪಿ ಮೃತನ ತಂದೆ ರಮೇಶ್ ಆಚಾರ್ ಆಗಿದ್ದಾನೆ.
ಇದನ್ನೂ ಓದಿ: ಚಿಕ್ಕಮಗಳೂರು ಜಿಲ್ಲೆಯಲ್ಲಿ 12,991 BPL ಕಾರ್ಡ್ ರದ್ದು; ನಿಮ್ಮ ತಾಲೂಕಿನ ರೇಷನ್ ಕಾರ್ಡ್ ಡಿಲೀಟ್ ಆದ ಡಿಟೈಲ್ಸ್ ಇಲ್ಲಿದೆʼ

ಕ್ಷುಲಕ ಕಾರಣಕ್ಕೆ ಮದ್ಯಪಾನ ಮಾಡಿ ಆಗಾಗ್ಗೆ ಮನೆಲ್ಲೇ ಗಲಾಟೆ ಮಾಡುತ್ತಿದ್ದ ತಂದೆ–ಮಗನ ನಡುವಿನ ಕಲಹ ತೀವ್ರವಾಗಿದ್ದು, ಅವರ ಕಾಟದಿಂದ ಬೇಸತ್ತ ಪ್ರದೀಪ್ ತಾಯಿ ಮನೆ ಬಿಟ್ಟು ಹೋಗಿದ್ದರು. ನಂತರ ಮನೆಯಲ್ಲಿ ತಂದೆ–ಮಗ ಇಬ್ಬರೇ ವಾಸವಿದ್ದರು ಎನ್ನಲಾಗಿದೆ.

ನಿನ್ನೆ ರಾತ್ರಿ ಮದ್ಯದ ಅಮಲಿನಲ್ಲಿ ರಮೇಶ್ ಆಚಾರ್ ತನ್ನ ಮಗ ಪ್ರದೀಪ್‌ನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆಗೈದಿದ್ದಾನೆ. ಗಂಭೀರ ಗಾಯಗೊಂಡ ಪ್ರದೀಪ್ ರಕ್ತದ ಮಡುವಿನಲ್ಲಿ ಇಡೀ ರಾತ್ರಿ ಬಿದ್ದು ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ.
ಬೆಳಗ್ಗೆ ಮಗನ ಮೃತದೇಹವನ್ನು ಹಾಲ್‌ನಿಂದ ಹೊರಾಂಗಣಕ್ಕೆ ಎಳೆದು ತಂದಿದ್ದ ಆರೋಪಿಯನ್ನು ಕಂಡ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೀತೇಂದ್ರ ಕುಮಾರ್ ದಯಾಮ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. (ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ: ಮೊಟ್ಟೆ ತಿಂದ್ರೆ ಕ್ಯಾನ್ಸರ್ ಬರುತ್ತಾ?; FSSAI ವರದಿ ಇಲ್ಲಿದೆ ನೋಡಿ













