ಎನ್. ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲ್ಲೂಕಿನಲ್ಲಿ ಕಾಡಾನೆಗಳ ಉಪಟಳ ತಡೆಗಟ್ಟುವ ಉದ್ದೇಶದಿಂದ ನಿರ್ಮಿಸಲಾಗುತ್ತಿರುವ ಸೋಲಾರ್ ಟೆಂಟಕಲ್ ಬೇಲಿ ಕಾಮ
ಗಾರಿ ಕಳಪೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇದನ್ನೂ ಓದಿ: ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ರಿಲೀಫ್; ಏನದು, ಮಿಸ್ ಮಾಡ್ದೆ ಈ ಸುದ್ದಿ ಓದಿ
ನರಸಿಂಹರಾಜಪುರ ವಲಯ ಅರಣ್ಯ ವ್ಯಾಪ್ತಿಯಲ್ಲಿ 2025–26ನೇ ಸಾಲಿಗೆ ಸೋಲಾರ್ ಟೆಂಟಕಲ್ ಬೇಲಿ ನಿರ್ಮಾಣಕ್ಕೆ ₹1.12 ಕೋಟಿ ಅನುದಾನ ಬಿಡುಗಡೆಯಾಗಿದೆ. ಈ ಯೋಜನೆಯಡಿ ವಿವಿಧ ಗ್ರಾಮಗಳಲ್ಲಿ ಒಟ್ಟು ಹಲವು ಕಿಲೋಮೀಟರ್ ಉದ್ದದ ಬೇಲಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಯೋಜನೆಯ ಪ್ರಕಾರ ಲಿಂಗಾಪುರ ಗ್ರಾಮದ ಚಂದ್ರಪ್ಪ ಅವರ ತೋಟದಿಂದ ಹೂವಣ್ಣಗೌಡ ಅವರ ತೋಟದವರೆಗೆ 2,800 ಮೀಟರ್, ಹಳೇದಾನಿವಾಸ ಗ್ರಾಮದ ಚುಂಚನಮನೆ ಬ್ಲಾಕ್ ವ್ಯಾಪ್ತಿಯಲ್ಲಿ 1,350 ಮೀಟರ್, ದಾನಿವಾಸ ಗ್ರಾಮದ ಮುದುಕೂರಿನ ಅಮ್ಮದ್ ಅವರ ತೋಟದಿಂದ ವಿಠಲ ಗ್ರಾಮದ ಮಧು ಅವರ ತೋಟದವರೆಗೆ 4 ಕಿಲೋಮೀಟರ್, ವಿಠಲ ಗ್ರಾಮದ ಕೆಸವೆ ಕೋಗುವಿನಿಂದ ಆನೆ ಕೋಗುವರೆಗೆ 5,058 ಮೀಟರ್ ಹಾಗೂ ಚಿಕ್ಕಗ್ರಹಾರ ವಲಯ ಅರಣ್ಯ ವ್ಯಾಪ್ತಿಯ ಹಂಚಿನಕೊಡಿಗೆಯಿಂದ ತಮ್ಮಯ್ಯನ ತೋಟದವರೆಗೆ 745 ಮೀಟರ್ ಉದ್ದದ ಬೇಲಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಈ ಕಾಮಗಾರಿಗಳ ಪೈಕಿ ಮುದುಕೂರಿನಿಂದ ವಿಠಲ ಗ್ರಾಮದವರೆಗೆ 4 ಕಿಲೋಮೀಟರ್ ಉದ್ದದಲ್ಲಿ ನಡೆಯುತ್ತಿರುವ ಬೇಲಿ ನಿರ್ಮಾಣ ಕಾಮಗಾರಿ ಕಳಪೆಯಾಗಿದೆ ಎಂಬ ದೂರುಗಳು ಸ್ಥಳೀಯರಿಂದ ಕೇಳಿಬಂದಿವೆ.
ಬೇಲಿ ನಿರ್ಮಾಣಕ್ಕೆ ಅಳವಡಿಸಿರುವ ಕಂಬಗಳು ಹಾಗೂ ತಂತಿಗಳು ಕಳಪೆ ಗುಣಮಟ್ಟದ್ದಾಗಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮಸ್ಥರ ತೋಟ ಇರುವ ಪ್ರದೇಶಗಳಲ್ಲಿ 20 ರಿಂದ 25 ಅಡಿ ಜಾಗವನ್ನು ಸ್ವಚ್ಛಗೊಳಿಸಿ ಬೇಲಿ ನಿರ್ಮಾಣಕ್ಕೆ ಸಿದ್ಧಪಡಿಸಿರುವುದಾದರೂ, ಅರಣ್ಯ ಪ್ರದೇಶದಲ್ಲಿ ಕೇವಲ 10 ರಿಂದ 15 ಅಡಿ ಮಾತ್ರ ಸ್ವಚ್ಛಗೊಳಿಸಲಾಗಿದೆ. ಜೊತೆಗೆ ಮರದ ಕೊಂಬೆಗಳನ್ನು ಸಮರ್ಪಕವಾಗಿ ತೆರವುಗೊಳಿಸದೇ ಕಾಮಗಾರಿ ಕೈಗೊಳ್ಳಲಾಗಿದೆ ಎಂಬ ಅಸಮಾಧಾನವೂ ವ್ಯಕ್ತವಾಗಿದೆ.
ಇದನ್ನೂ ಓದಿ: ರಾಜ್ಯದ ರೈತರಿಗೆ ಗುಡ್ ನ್ಯೂಸ್; ಇನ್ಮುಂದೆ ಮೊಬೈಲ್ ನಲ್ಲೇ ಸಿಗಲಿದೆ ಹಳೆಯ ಪಹಣಿ
ನೇರವಾಗಿ ಬೇಲಿ ನಿರ್ಮಾಣ ಮಾಡಬೇಕಾದಲ್ಲಿ ಅಂಕು–ಡೊಂಕಾಗಿ ನಿರ್ಮಿಸಲು ಮುಂದಾಗಿರುವುದು ಕೂಡ ಆತಂಕ ಮೂಡಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಪ್ರತಿ 2 ಕಿಲೋಮೀಟರ್ಗೆ ಒಂದು ಸೋಲಾರ್ ವ್ಯವಸ್ಥೆ ಅಳವಡಿಸುವುದಾಗಿ ತಿಳಿಸಿದ್ದರೂ, ಗಿಡಗಂಟಿ ಮತ್ತು ಮರದ ಕೊಂಬೆಗಳನ್ನು ಸರಿಯಾಗಿ ತೆರವುಗೊಳಿಸದ ಕಾರಣ ಮಳೆ ಅಥವಾ ಗಾಳಿ ಬಂದಾಗ ಕೊಂಬೆಗಳು ಬಿದ್ದು ಬೇಲಿ ಮುರಿಯುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನೂ ಬೇಲಿಗೆ ಅಳವಡಿಸಿರುವ ಕಂಬಗಳನ್ನು ಆಳವಾಗಿ ಗುಂಡಿ ಮಾಡಿ ಅಳವಡಿಸಿಲ್ಲ. ರಭಸವಾದ ಗಾಳಿ ಬೀಸಿದರೆ ಕಂಬಗಳು ಸುಲಭವಾಗಿ ಮುರಿದು ಬೀಳುವ ಸಂಭವವಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಕಾಮಗಾರಿಯನ್ನು ಸಂಬಂಧಿತ ಅಧಿಕಾರಿಗಳು ಪರಿಶೀಲಿಸಿ ಗುಣಮಟ್ಟದ ಕೆಲಸ ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಎಲ್ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ; ಗ್ರಾಹಕರಿಗೆ ಬಿಗ್ ಶಾಕ್












