ಚಿಕ್ಕಮಗಳೂರು ಅರಣ್ಯ ಉಪವಿಭಾಗದಲ್ಲಿ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಸೋಲಾರ್ ಬೇಲಿ ನಿರ್ಮಿಸಲು 5 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್ ದೀಕ್ಷಿತ್ ತಿಳಿಸಿದ್ದಾರೆ.

ಶನಿವಾರ ತಾಲ್ಲೂಕಿನ ಬೈದುವಳ್ಳಿ ಗ್ರಾಮದಲ್ಲಿ ಆನೆ ಶಿಬಿರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ತಿಂಗಳಿನಿಂದ ಚಿಕ್ಕಮಗಳೂರು ಉಪವಿಭಾಗದ ವ್ಯಾಪ್ತಿಯಲ್ಲಿ ಮೂರು ಜನ ಕಾಡಾನೆ ದಾಳಿಯಿಂದ ಪ್ರಾಣ ಕಳೆದುಕೊಂಡಿದ್ದರೆ. ಆಲ್ದೂರು ವಲಯದಲ್ಲಿ ಇಬ್ಬರು ಆಕಸ್ಮಿಕವಾಗಿ ಸಾವನ್ನಪ್ಪಿದ್ದು, ಮೂಡಿಗೆರೆ ವಲಯದ ವ್ಯಾಪ್ತಿಯಲ್ಲಿ ಆನೆ ಕಾರ್ಯಪಡೆಯ ಸಿಬ್ಬಂದಿ ಕಾರ್ತಿಕ್ ಗೌಡ ಆನೆಗಳನ್ನು ಕಾಡುಗಟ್ಟುವ ಕಾರ್ಯಾಚರಣೆ ವೇಳೆ ಕಾಡಾನೆ ದಾಳಿಯಿಂದ ಸಾವನ್ನಪ್ಪಿದ್ದಾರೆ. ಅಲ್ಲದೇ ರೈತರ ಜಮೀನಿಗೆ ಕಾಡಾನೆಗಳು ಹಾನಿ ಮಾಡುತ್ತಿರುವ ಬಗ್ಗೆ ನಿರಂತರ ದೂರುಗಳು ಕೇಳಿಬರುತ್ತಿವೆ.
ಇದನ್ನೂ ಓದಿ; 28 ನವೆಂಬರ್ 2023 ಅಡಿಕೆ ರೇಟ್, ಇಂದಿನ ಅಡಿಕೆ ಧಾರಣೆ ಎಲ್ಲೆಲ್ಲಿ ಎಷ್ಟಿದೆ? ಇಲ್ಲಿದೆ ಮಾಹಿತಿ
ಈ ಹಿನ್ನಲೆಯಲ್ಲಿ ಕಾಡಾನೆಗಳು ಜನವಸತಿ ಪ್ರದೇಶಕ್ಕೆ ಬಾರದಂತೆ ನಿಯಂತ್ರಣ ಮಾಡಲು ಸೋಲಾರ್ ಬೇಲಿ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಆರಂಭಿಕ ಹಂತದಲ್ಲಿ 5 ಕೋಟಿ ಹಣವನ್ನು ಮೀಸಲಿಡಲಾಗಿದೆ. ಟೆಂಡರ್ ಪ್ರಕ್ರಿಯೆಯ ನಂತರ ಶೀರ್ಘವಾಗಿ ಕಾಮಗಾರಿ ಆರಂಭಿಸಲಾಗುತ್ತದೆ. ಈ ಬೇಲಿ ಜಿಲ್ಲೆಯ ಸಾರಗೋಡು, ಕುಂದೂರು, ಬಾಸ್ತಿ, ಊರುಬಗೆ, ಗುತ್ತಿ, ಬೈರಾಪುರ ಭಾಗದಲ್ಲಿ ನಿರ್ಮಾಣ ಮಾಡಲು ನೀಲಿನಕ್ಷೆ ತಯಾರಿಸಲಾಗಿದೆ. ಹಾಗೆಯೇ ಮೂಡಿಗೆರೆ ಪಟ್ಟಣಕ್ಕೆ ಆನೆಗಳು ಬಾರದಂತೆ ತಡೆಯಲು ಆಯಾಕಟ್ಟಿನ ಜಾಗದಲ್ಲಿ ಸೋಲಾರ್ ಬೇಲಿ ನಿರ್ಮಿಸಲಾಗುವುದು ಎಂದಿದ್ದಾರೆ.
ಚಿಕ್ಕಮಗಳೂರು ಪ್ರಧಾನ ಅರಣ್ಯ ಅಧಿಕಾರಿ ಯು.ಪಿ. ಸಿಂಗ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 7 ಕಾಡಾನೆಗಳನ್ನು ಹಿಡಿಯಲು ಸರ್ಕಾರದಿಂದ ಆದೇಶವಾಗಿತ್ತು. ಅದರಲ್ಲಿ ಒಂದು ಆನೆಯನ್ನು ಸೆರೆಹಿಡಿಯಲಾಗಿದೆ. ಇನ್ನೂ 6 ಕಾಡಾನೆಗಳನ್ನು ನಿರ್ದಿಷ್ಟವಾಗಿ ಗುರುತಿಸಿ ಸೆರೆಹಿಡಿಯಲು ಆದೇಶ ಚಾಲ್ತಿಯಲ್ಲಿದೆ. ಈಗಾಗಲೇ ಮೂಡಿಗೆರೆ ತಾಲ್ಲೂಕಿನ ಬೈದುವಳ್ಳಿ ಗ್ರಾಮದಲ್ಲಿ ಆನೆ ಶಿಬಿರ ತೆರೆದಿದ್ದು, ಸೆರೆಹಿಡಿಯಬೇಕಾದ ಆನೆಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ ಎಂದರು.
ರಾಜ್ಯ ಉಪ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಆನೆಪಡೆ ಶಾಶ್ವತಿ ಮಿಶ್ರಾ ಮಾತನಾಡಿ, ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಒಂದು ಆನೆ ಬಿಡಾರಗಳನ್ನು ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ. ಅದರಂತೆ ಚಿಕ್ಕಮಗಳೂರು ಜಿಲ್ಲೆಯ ಮುತ್ತೋಡಿ ಅರಣ್ಯ ಪ್ರದೇಶದಲ್ಲಿ ಆನೆ ಬಿಡಾರವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಇದರಿಂದ ಈ ಭಾಗದಲ್ಲಿ ಕಾಡಾನೆಗಳ ಸಮಸ್ಯೆ ನಿಯಂತ್ರಣಕ್ಕೆ ತಕ್ಷಣಕ್ಕೆ ಸ್ಪಂದಿಸಲು ಸಹಾಯಕವಾಗುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿಗೂ ಇದು ಅನುಕೂಲವಾಗತ್ತದೆ ಎಂದರು.
ಇನ್ನು ಸುದ್ದಿಗೋಷ್ಠಿಯಲ್ಲಿ ಚಿಕ್ಕಮಗಳೂರು ಡಿಸಿಎಫ್ ರಮೇಶ್ ಬಾಬು, ಭದ್ರಾ ವೈಲ್ಡ್ ಲೈಪ್ ನಿರ್ದೇಶಕ ಯಶ್ಪಾಲ್ ಕ್ಷೀರಸಾಗರ್, ಪಶುವೈದ್ಯರಾದ ಡಾ. ಮುಜೀಬ್, ಡಾ. ವಿಶಾಖ, ಮೂಡಿಗೆರೆ ಎಸಿಎಫ್ ರಘು, ಆರ್.ಎಫ್.ಓ. ಚರಣ್ ಕುಮಾರ್ ಇದ್ದರು. (ತನು ಕೊಟ್ಟಿಗೆಹಾರ)
ರಸ್ತೆ ವಿಸ್ತರಣೆಗೆ ಬಲಿಯಾಗಲಿವೆ ಬೃಹತ್ ಮರಗಳು
ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಕಾಡು ಬೆಳಿಸಿ ನಾಡು ಉಳಿಸಿ, ಮನೆಗೊಂದು ಮರ ಊರಿಗೊಂದು ವನ, ಗಿಡ ಮರಗಳನ್ನ ಬೆಳಿಸಿ ಪರಿಸರ ಕಾಪಾಡಿ. ಹೀಗಂತ ಹೇಳಿ ಬೃಹತ್ತಾಗಿ ಬೆಳೆದಿರುವ ನೂರಾರು ಮರಗಳ ಮಾರಣ ಹೋಮ ಮಾಡಲು ರೆಡಿಯಾಗಿದೆ.
ತೀರ್ಥಹಳ್ಳಿ-ಕೋಣಂದೂರು ಮಾರ್ಗದ ರಸ್ತೆ ವಿಸ್ತರಣೆ ಕಾಮಗಾರಿ ಆರಂಭಗೊಂಡಿದೆ. ಮರ ಕಡಿತಲೆಗೆ ಅರಣ್ಯ ಇಲಾಖೆಯ ಕಾನೂನು ಅಡ್ಡಿಯಾಗುವ ಕಾರಣ ಮರಗಳನ್ನು ಉರುಳಿಸುವ ತಂತ್ರ ಅನುಸರಿಸಲಾಗುತ್ತಿದೆ. ರಸ್ತೆಯ ಇಕ್ಕೆಲಗಳಲ್ಲಿ ನೆರಳು ನೀಡಲು ಬೆಳೆಸಿದ್ದ ಪುರಾತನ ಕಾಲದ ಹಲವು ಜಾತಿಯ ಮರಗಳು ಧರೆಗುರುಳುವ ಆತಂಕ ಎದುರಾಗಿದೆ.
ರಸ್ತೆ ವಿಸ್ತರಣೆ ಮರಗಳ ಮಾರಣ ಹೋಮ:
ಆರಗ, ಕೋಣಂದೂರು, ಹಾದಿಗಲ್ಲು, ಹುಂಚ, ರಿಪ್ಪನ್ ಪೇಟೆ ರಾಜ್ಯ ಹೆದ್ದಾರಿ ಮಾರ್ಗವಾಗಿ ಆನಂದಪುರದಲ್ಲಿ ರಾಷ್ಟ್ರೀಯ ಹೆದ್ದಾರಿ 206 ಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಪ್ರಥಮ ಹಂತದ ಕಾಮಗಾರಿಗೆ ಚಾಲನೆ ದೊರೆತಿದೆ. ಕೋಟೆಗದ್ದೆಯಿಂದ ಹಾದಿಗಲ್ಲುವರೆಗೆ ಅಂದಾಜು 25 ಕೋಟಿ ವೆಚ್ಚದಲ್ಲಿ 5.75 ಕಿ.ಮೀ. ದೂರದ 7 ಮೀಟರ್ ಅಗಲದ ಕೋಣಂದೂರು ಚತುಷ್ಪಥ ರಸ್ತೆಗೆ ನೀಲನಕ್ಷೆ ತಯಾರಾಗಿದೆ.
ಇದನ್ನೂ ಓದಿ; ಪಿಎಂ ಕಿಸಾನ್ ಯೋಜನೆ; 15ನೇ ಕಂತಿನ ಹಣ ಬಿಡುಗಡೆ; ನಿಮ್ಮ ಖಾತೆಗೆ ಹಣ ಬಂತಾ ಈಗಲೇ ಚೆಕ್ ಮಾಡಿ…
ಈಗಾಗಲೇ ಆರಗ, ಹಿರೇಸರ, ಜಯಪುರ, ಗುಡ್ಡೇಕೊಪ್ಪ, ತ್ಯಾರಂದೂರು, ಕೋಟೇಗದ್ದೆ, ಕೌರಿಕಾನು ಮಾರ್ಗದ ರಸ್ತೆಗಳ ವಿಸ್ತರಣೆಗೆ ಸಿದ್ಧತೆ ನಡೆಯುತ್ತಿದೆ. ಕೇವಲ 8 ಕಿ.ಮೀ. ಅಂತರದಲ್ಲಿರುವ ೨೪೫ಕ್ಕೂ ಹೆಚ್ಚು ಮರಗಳನ್ನು ಉರುಳಿಸಿದ್ದಾರೆ ಎನ್ನಲಾಗಿದೆ.
ರಸ್ತೆ ವಿಸ್ತರಣೆ ಕಾಮಗಾರಿಯಿಂದಾಗಿ ಮರಗಳಿಗೆ ಹಾನಿಯಾಗುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಸ್ಥಳ ಪರಿಶೀಲನೆ ನಡೆಸಿ ಅರಣ್ಯ ಸಂಪತ್ತಿಗೆ ಹಾನಿ ಮಾಡಿರುವುದು ಸಾಬೀತಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತೀರ್ಥಹಳ್ಳಿ ವಲಯ ಅರಣ್ಯಾಧಿಕಾರಿ ಲೋಕೇಶ್ ಹೇಳಿದ್ದಾರೆ.












