ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಬಾವಿಕೆರೆ ಗ್ರಾಮದಲ್ಲಿ 2019ರಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ 2ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 7 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ಆರೋಪಿ ಕುಮಾರನಾಯ್ಕ ಹಣದ ವಿಚಾರವಾಗಿ ಉಂಟಾದ ಜಗಳದ ವೇಳೆ ಸುಮಿತ್ರಾ ಬಾಯಿ ಅವರನ್ನು ಕೊಲೆಗೈದಿದ್ದನು. ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಯ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಶಿಕ್ಷೆ ಪ್ರಕಟಿಸಿದೆ.

ನ್ಯಾಯಾಧೀಶ ಪ್ರವೀಣ್ ಕುಮಾರ್ ಅವರು ಶಿಕ್ಷೆ ವಿಧಿಸಿದ್ದು, ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿಯಾಗಿ 6 ತಿಂಗಳ ಕಠಿಣ ಜೈಲು ಶಿಕ್ಷೆಯನ್ನು ಅನುಭವಿಸಬೇಕೆಂದು ಆದೇಶಿಸಿದ್ದಾರೆ.
ಏನಿದು ಪ್ರಕರಣ:
ಲಕ್ಕವಳ್ಳಿ ಹೋಬಳಿಯ ಬಾವಿಕೆರೆ ಗ್ರಾಮದ ನಿವಾಸಿ ಸುಮಿತ್ರಾ ಬಾಯಿ ಅವರ ಪತಿ ರಾಮನಾಯ್ಕ ಅನಾರೋಗ್ಯದಿಂದ ಮೃತಪಟ್ಟಿದ್ದರು. ಬಳಿಕ ರಾಮನಾಯ್ಕ ಅವರ ತಮ್ಮ ಕುಮಾರನಾಯ್ಕ ಮತ್ತು ಸುಮಿತ್ರಾ ಬಾಯಿ ನಡುವೆ ಅಕ್ರಮ ಸಂಬಂಧವಿದ್ದ ಆರೋಪ ಕೇಳಿಬಂದಿತ್ತು. ಈ ಸಂಬಂಧ ಮಕ್ಕಳ ಮೇಲೆ ದುಷ್ಪರಿಣಾಮ ಬೀರದಂತೆ ಸುಮಿತ್ರಾ ಬಾಯಿ ತಮ್ಮ ಮಕ್ಕಳನ್ನು ಹೊಗರೆಹಳ್ಳಿಯಲ್ಲಿರುವ ತಾಯಿ ಮನೆಯಲ್ಲಿ ಬಿಟ್ಟು ವಾಸಿಸುತ್ತಿದ್ದರು.
2019ರ ಅಕ್ಟೋಬರ್ 7ರಂದು ರಾತ್ರಿ ಹಣದ ವಿಚಾರವಾಗಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ಅಟ್ಟದ ಮೇಲೆ ಹಣ ಇಟ್ಟಿರುವುದಾಗಿ ಹೇಳಿ ಸುಮಿತ್ರಾ ಬಾಯಿ ಅವರನ್ನು ಹಿಂಬಾಲಿಸಿದ ಕುಮಾರನಾಯ್ಕ, ವಾಗ್ವಾದ ತೀವ್ರಗೊಂಡಾಗ ಆಕೆಗೆ ಬಲವಾಗಿ ಹೊಡೆದಿದ್ದಾನೆ. ಕೆಳಗೆ ಬಿದ್ದಿದ್ದ ಸುಮಿತ್ರಾ ಬಾಯಿ ಅವರ ಕುತ್ತಿಗೆಗೆ ತಾನು ಧರಿಸಿದ್ದ ಪಂಚೆಯನ್ನು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗವಾಗಿತ್ತು.
ಲಕ್ಕವಳ್ಳಿ ಪೊಲೀಸ್ ಠಾಣೆಯ ಅಂದಿನ ಪಿಐ ಹೆಚ್.ಎಸ್. ಜಗದೀಶ್ ಹಾಗೂ ತರೀಕೆರೆ ಠಾಣೆಯ ಸಿಪಿಐ ಕೆ.ಎಂ. ಯೋಗೇಶ್ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ತನಿಖಾ ಸಹಾಯಕರಾಗಿ ಹೆಚ್ಸಿ ಪ್ರದೀಪ್ ಕುಮಾರ್ ಹಾಗೂ ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಸಿಬ್ಬಂದಿ ಕೆ.ಆರ್. ಶಿವಕುಮಾರ್ ಸಹಕರಿಸಿದ್ದರು.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಭಾವನಾ ಅವರು ವಾದ ಮಂಡಿಸಿದ್ದು, ಸುದೀರ್ಘ ವಿಚಾರಣೆ ಬಳಿಕ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.












