ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಇಲ್ಲಿನ ಬಸ್ ನಿಲ್ದಾಣದ ಮಹಿಳಾ ಶೌಚಾಲಯದಲ್ಲಿ ಮಹಿಳೆಯರಿಗೆ ತಿಳಿಯದಂತೆ ಮೊಬೈಲ್ ಫೋನ್ ಮೂಲಕ ಗೌಪ್ಯವಾಗಿ ಚಿತ್ರೀಕರಣ ಮಾಡಲು ಯತ್ನಿಸಿದ ಆರೋಪದಡಿ ಶೌಚಾಲಯದ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ಬಂಧಿತ ಆರೋಪಿಯನ್ನು ಬಿಹಾರ ಮೂಲದ ರೋಶನ್ ಕುಮಾರ್ ಎಂದು ಗುರುತಿಸಲಾಗಿದೆ.

ಉಡುಪಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯೊಬ್ಬರು ಮಾಗುಂಡಿಯಲ್ಲಿರುವ ಸಂಬಂಧಿಕರ ಮನೆಗೆ ತೆರಳುವ ಮಾರ್ಗ ಮಧ್ಯೆ ಬಾಳೆಹೊನ್ನೂರು ಬಸ್ ನಿಲ್ದಾಣದ ಮಹಿಳಾ ಶೌಚಾಲಯಕ್ಕೆ ತೆರಳಿದ್ದರು. ಈ ವೇಳೆ ಶೌಚಾಲಯದ ಸಿಬ್ಬಂದಿ ಮೊಬೈಲ್ ಫೋನ್ ಮೂಲಕ ಗೌಪ್ಯವಾಗಿ ಚಿತ್ರೀಕರಣ ಮಾಡುತ್ತಿರುವುದನ್ನು ಅವರು ಗಮನಿಸಿ ತಕ್ಷಣ ಬಾಳೆಹೊನ್ನೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ವಶಕ್ಕೆ ಪಡೆದು ಮೊಬೈಲ್ ಫೋನ್ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಮಹಿಳೆಯರ ಚಿತ್ರೀಕರಣಕ್ಕೆ ಯತ್ನಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ವಿದ್ಯಾರ್ಥಿನಿ ಅಧಿಕೃತ ದೂರು ನೀಡಲು ನಿರಾಕರಿಸಿದರೂ, ಘಟನೆಯ ಗಂಭೀರತೆಯನ್ನು ಪರಿಗಣಿಸಿ ಪೊಲೀಸರು ಆರೋಪಿಯ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಶೌಚಾಲಯ ನಿರ್ವಹಣೆಯ ಹೊಣೆ ಹೊತ್ತಿರುವ ಬೆಂಗಳೂರಿನ ಮುಖ್ಯಸ್ಥರಿಗೆ ವಿಷಯ ತಿಳಿಸಲಾಗಿದೆ. ಘಟನೆಯ ಬಳಿಕ ಆರೋಪಿಯನ್ನು ಕೆಲಸದಿಂದ ವಜಾಗೊಳಿಸಲಾಗಿದ್ದು, ಅವರ ಸ್ಥಾನಕ್ಕೆ ಹೊಸ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಬಾಳೆಹೊನ್ನೂರು ಪೊಲೀಸ್ ಠಾಣೆಯ ಪಿಎಸ್ಐ ಅಂಬರೀಶ್ ತಿಳಿಸಿದ್ದಾರೆ.












