ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಹುಯಿಗೆರೆಯ ಶಂಕರ ಭಾರತಿ ಗೋಶಾಲೆಗೆ ಹೆಚ್ಚುವರಿ ಕಟ್ಟಡ, ಗೋದಾಮು ನಿರ್ಮಾಣಕ್ಕೆ ಶೃಂಗೇರಿ ಶಾರದಾ ಪೀಠದಿಂದ 5 ಲಕ್ಷ ರೂಪಾಯಿಯನ್ನು ಆಶೀರ್ವಾದ ರೂಪದಲ್ಲಿ ನೀಡಲಾಗಿದೆ ಎಂದು ಗೋಶಾಲೆ ಮುಖ್ಯಸ್ಥರಾದ ಪ್ರವೀಣ್ ಖಾಂಡ್ಯ ತಿಳಿಸಿದ್ದಾರೆ.
ಇದನ್ನೂ ಓದಿ: ಪಾನ್ ಕಾರ್ಡ್ ಹೊಂದಿರುವವರ ಗಮನಕ್ಕೆ; ಇಂತಹವರಿಗೆ 10 ಸಾವಿರ ದಂಡ!

ಹುಯಿಗೆರೆ ಶಂಕರ ಭಾರತಿ ಗೋಶಾಲೆ ಎರಡೂವರೆ ವರ್ಷದಿಂದ ಗೋವುಗಳ ಸಂರಕ್ಷಣೆ ಮಾಡಿಕೊಂಡು ಬರುತ್ತಿದ್ದು, ಶಾರದಾ ಪೀಠದ ಉಭಯ ಜಗದ್ಗುರುಗಳ ಆಶೀರ್ವಾದದಿಂದ ಎರಡು ಸೂರುಗಳನ್ನು ನಿರ್ಮಿಸಿಕೊಡಲಾಗಿದೆ. ಈಗ ಗೋಶಾಲೆಯ ಹೆಚ್ಚುವರಿ ಕಟ್ಟಡ ಹಾಗೂ ಗೋದಾಮು ನಿರ್ಮಾಣಕ್ಕಾಗಿ ಮತ್ತೆ ಐದು ಲಕ್ಷ ರೂಪಾಯಿಯನ್ನು ಜಗದ್ಗುರು ಶ್ರೀ ವಿಧುಶೇಖರ ಭಾರತಿ ತೀರ್ಥ ಸ್ವಾಮೀಜಿ ನೀಡಿದ್ದಾರೆ ಎಂದು ಹೇಳಿದರು.
ಗೋಶಾಲೆಯಲ್ಲಿ 200ಕ್ಕೂ ಹೆಚ್ಚು ಗೋವುಗಳನ್ನು ಸಲಹುತ್ತಿದ್ದು, ಸಮಾಜ ನಮ್ಮ ಮೇಲೆ ವಿಶ್ವಾಸವಿಟ್ಟು ಪ್ರೋತ್ಸಾಹ ನೀಡುತ್ತಿದೆ. ಗೋಶಾಲೆಯ ಪ್ರತಿ ಬೆಳವಣಿಗೆಯಲ್ಲಿ ಖುದ್ದು ಶ್ರೀಮಠದ ಹಿರಿಯರಾದ ಕೃಷ್ಣಮೂರ್ತಿ ಪರಿಶೀಲಿಸಿ ಮಾರ್ಗದರ್ಶನ ನೀಡುತ್ತಿದ್ದಾರೆ. ಹಿಂದು ಸಮಾಜದ ಸಹಕಾರದೊಂದಿಗೆ ಗೋಮಾತೆಯ ಸಂರಕ್ಷಣೆ ಕೆಲಸ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ; 15,000 ಸಂಬಳ
ಗೋವು ಕೇವಲ ಭಾವನಾತ್ಮಕ ಧಾರ್ಮಿಕ ನಂಬಿಕೆ ಅಲ್ಲ ವೈಜ್ಞಾನಿಕವಾಗಿ ಪರಿಸರಕ್ಕೆ ಅತ್ಯಂತ ಅಗತ್ಯವಾದ ಜೀವಿ, ರೈತರ ಬೆನ್ನೆಲುಬು. ಇಂದಿನ ಬಹುತೇಕ ಪರಿಸರ ಸಮಸ್ಯೆಗಳಿಗೆ ಗೋವು ಉತ್ತರ ನೀಡುವ ಸಾಮರ್ಥ್ಯ ಹೊಂದಿದೆ. ಹಾಗಾಗಿ ಸ್ವಾರ್ಥಭಾವ ಬಿಟ್ಟು ಗೋವನ್ನು ಸಂರಕ್ಷಣೆ ಮಾಡಬೇಕಿದೆ ಎಂದರು.
ಸಮಾಜದಲ್ಲಿ ಗೋವು ಮಾತೆಯಾಗಬೇಕು ಹೊರತು ಅನಾಥವಾಗಬಾರದು. ಗೋವು ದೇಶದ ಸಂಪತ್ತು ಆಗಬೇಕೆ ಹೊರತು, ವ್ಯಾಪಾರದ ವಸ್ತುವಾಗಬಾರದು. ಶ್ರೀಶಂಕರರು ಹೇಳಿದಂತೆ ಜಗತ್ತಿಗೆಲ್ಲ ಯಾರು ತಾಯಿ ಎಂದರೆ ಗೋವು ಮಾತೆಯಾಗಿ ಪೂಜಿತಳು ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.












