
ಜಯಪುರ: (ನ್ಯೂಸ್ ಮಲ್ನಾಡ್ ವರದಿ) ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ರಾಷ್ಟ್ರಾದ್ಯಂತ 2.5 ಲಕ್ಷಕ್ಕೂ ಅಧಿಕ ಗ್ರಾಮಗಳಲ್ಲಿ ಹಿಂದೂ ಸಮಾಜೋತ್ಸವಗಳನ್ನು ಆಯೋಜಿಸಲಾಗುತ್ತಿದ್ದು, ಅದರ ಭಾಗವಾಗಿ ಕೊಪ್ಪ ತಾಲೂಕು ಹಿಂದೂ ಸಮಾಜೋತ್ಸವವನ್ನು ಮೇಗುಂದಾ ಹೋಬಳಿ ಕೇಂದ್ರ ಸ್ಥಾನವಾದ ಜಯಪುರದಲ್ಲಿ ಫೆಬ್ರವರಿ 1ರಂದು ಭಾನುವಾರ ವಿಜೃಂಭಣೆಯಿಂದ ನಡೆಸಲಾಗುವುದು ಎಂದು ಮೇಗುಂದಾ ಹೋಬಳಿ ಆಯೋಜನ ಸಮಿತಿಯ ಸಂಯೋಜಕ ಸುಧಾಕರ್ ತಿಳಿಸಿದ್ದಾರೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಜಯಪುರದ ಪತ್ರಿಕಾ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಹಾಗೂ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂ ಸಮಾಜೋತ್ಸವವು ನಮ್ಮೆಲ್ಲ ಹಿಂದೂಗಳ ಹೆಮ್ಮೆಯ ಕಾರ್ಯಕ್ರಮವಾಗಿದ್ದು, ಇದನ್ನು ಯಶಸ್ವಿಗೊಳಿಸಲು ನೂರಾರು ಕಾರ್ಯಕರ್ತರು ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಭಾನುವಾರ ಬೆಳಗ್ಗೆ 9.30ಕ್ಕೆ ಜಯಪುರ ವರ್ತೆಕಲ್ ಮಹಾಗಣಪತಿ ದೇವಸ್ಥಾನದಿಂದ ಶೋಭಾಯಾತ್ರೆ ಆರಂಭವಾಗಲಿದ್ದು, 500ಕ್ಕೂ ಅಧಿಕ ಮಾತೆಯರ ಪೂರ್ಣಕುಂಭ, ದೇಶಕ್ಕಾಗಿ ದುಡಿದು ಪ್ರಾಣ ತ್ಯಾಗ ಮಾಡಿದ ಮಹಾಪುರುಷರ ಸ್ತಬ್ಧಚಿತ್ರಗಳು, ಚಂಡೆ ವಾದನ, ಭಜನಾ ಕುಣಿತ ಹಾಗೂ ವಿವಿಧ ಕಲಾತಂಡಗಳೊಂದಿಗೆ ಶೋಭಾಯಾತ್ರೆ ಜಯಪುರದ ಮುಖ್ಯ ನಗರ ಮಾರ್ಗಗಳಲ್ಲಿ ಸಾಗಲಿದೆ. ಬಳಿಕ ಮಕ್ಕಿಕೊಪ್ಪದ ಜಯ ಪೂಜಾರಿಯವರ ಗದ್ದೆಯಲ್ಲಿ ಸಾರ್ವಜನಿಕ ಸಮಾರಂಭ ನಡೆಯಲಿದೆ.
ಸಮಾರಂಭದಲ್ಲಿ ಶ್ರೀಕ್ಷೇತ್ರ ಹರಿಹರಪುರದ ಶ್ರೀ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿಕೊಳ್ಳಲಿದ್ದು, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಆಗಮಿಸುವ ಎಲ್ಲಾ ಸಮಾಜಬಾಂಧವರಿಗೆ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜಯಪುರ ಮಂಡಲ ಸಂಚಾಲಕ ಚಂದ್ರಶೇಖರ್ ಮಳಿಗೆ, ತಾಲೂಕು ಸಮಿತಿಯ ಉಪಾಧ್ಯಕ್ಷ ರಂಗನಾಥ್ ರಾಂಪಲ್, ಸಹಸಂಯೋಜಕ ಬೋಜ ಶೆಟ್ಟಿ, ಹೋಬಳಿ ಸಹಸಂಯೋಜಕ ಗಜೇಂದ್ರ, ಪ್ರಚಾರ ಸಮಿತಿಯ ಮುಖ್ಯಸ್ಥ ಜಯಂತಿ ನಾಗರಾಜ್, ಮಂಡಲ ಸಮಿತಿ ಸದಸ್ಯರಾದ ಪ್ರಭಾಕರ್, ಅನಂತ ಹೆಬ್ಬಾರ್, ಮಹಿಳಾ ಸಮಿತಿ ಮುಖ್ಯಸ್ಥೆ ಸುನಿತಾ ಶ್ರೀನಿವಾಸ್, ಮಂಡಲ ಸಹಸಂಯೋಜಕ ಸಂತೋಷ್ ಹಾಗೂ ಸದಸ್ಯ ಶೇಖರ್ ಉಪಸ್ಥಿತರಿದ್ದರು. (ವರದಿ: ಎಂ.ಪಿ. ಪ್ರದೀಪ್ ಹೆಬ್ಬಾರ್, ಜಯಪುರ)













