ಮಣ್ಣಿನಲ್ಲಿ ಬಚ್ಚಿಟ್ಟಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಬೀಟೆ ಮರದ ತುಂಡುಗಳು ವಶಕ್ಕೆ

ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಮೀಸಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ಅಕ್ರಮವಾಗಿ ಮಣ್ಣಿನಲ್ಲಿ ಮುಚ್ಚಿಡಲಾಗಿದ್ದ ಬೀಟೆ ಜಾತಿಯ ಮರದ ನಾಟಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿ ಪತ್ತೆ ಹಚ್ಚಿ, ಜಪ್ತಿ ಮಾಡಿದ್ದಾರೆ. ಈ ಸಂಬಂಧ ಹೊಸನಗರ ವಲಯ ಅರಣ್ಯ ಕಚೇರಿಯಲ್ಲಿ ಮೊಕದ್ದಮೆ ದಾಖಲಾಗಿದೆ.

ಖಚಿತ ಮಾಹಿತಿ ಮೇರೆಗೆ ಹೊಸನಗರ ತಾಲ್ಲೂಕಿನ ಕೆರೆಹಳ್ಳಿ ಹೋಬಳಿ, ನಂದ್ರಿ ಗ್ರಾಮದ ಸರ್ವೆ ನಂಬರ್ 15ರ ನಂದ್ರಿ ಮೀಸಲು ಅರಣ್ಯಕ್ಕೆ ಹೊಂದಿಕೊಂಡಿರುವ ವರ್ಗಾವಣೆಗೊಂಡ ಅರಣ್ಯ ಪ್ರದೇಶದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದರು. ಅಲ್ಲಿನ ಒತ್ತುವರಿ ಜಮೀನಿನಲ್ಲಿರುವ ಕೃಷಿ ಹೊಂಡದ ಪಕ್ಕದಲ್ಲಿ, ಅಂದಾಜು 2 ರಿಂದ 3 ವರ್ಷಗಳ ಹಿಂದೆ ಕಡಿತಲೆ ಮಾಡಲಾಗಿದ್ದ 14 ಬೀಟೆ ಜಾತಿಯ ಮರದ ನಾಟದ ತುಂಡುಗಳನ್ನು ಮಣ್ಣಿನಲ್ಲಿ ಮುಚ್ಚಿ ಅಕ್ರಮವಾಗಿ ದಾಸ್ತಾನು ಮಾಡಿಟ್ಟಿರುವುದು ಪತ್ತೆಯಾಗಿದೆ. ಸದ್ಯ ಈ ಎಲ್ಲಾ ಬೀಟೆ ಮರದ ತುಂಡುಗಳನ್ನು ಅರಣ್ಯ ಇಲಾಖೆಯು ತನ್ನ ವಶಕ್ಕೆ (ಅಮಾನತ್ತು) ಪಡೆದುಕೊಂಡಿದೆ. ಇದರ ಮೌಲ್ಯ 6.50 ಲಕ್ಷಕ್ಕೂ ಹೆಚ್ಚು ಎಂದು ಹೇಳಲಾಗುತ್ತಿದೆ.

ಈ ಅಕ್ರಮ ಕೃತ್ಯವೆಸಗಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಟೌನ್‌ನ ಮಂಡಿಬೆಲೆ ರಸ್ತೆ ನಿವಾಸಿಯಾದ ಗಣೇಶ (40 ವರ್ಷ) ಎಂಬಾತನನ್ನು ಪ್ರಮುಖ ಆರೋಪಿ (A1) ಎಂದು ಗುರುತಿಸಲಾಗಿದೆ. ಆರೋಪಿಯ ವಿರುದ್ಧ ಕರ್ನಾಟಕ ಅರಣ್ಯ ಕಾಯ್ದೆ 1963 ಮತ್ತು ಕರ್ನಾಟಕ ಅರಣ್ಯ ಕಾನೂನು 1969ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದಿನಾಂಕ 18-05-2026 ರಿಂದ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಗ್ಗೆ ಸಿಗುವ ಖಚಿತ ಮಾಹಿತಿಯ ಮೇರೆಗೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಹೊಸನಗರ ವಲಯ ಅರಣ್ಯಾಧಿಕಾರಿ ಅನಿಲ್ ಕುಮಾರ್ ಎಸ್., ಉಪ ವಲಯ ಅರಣ್ಯಾಧಿಕಾರಿ ನವೀನ ಕುಮಾರ್ ಸಿ.ಎಂ., ಗಸ್ತು ಅರಣ್ಯ ಪಾಲಕರಾದ ಪ್ರಶಾಂತ ಜಿ., ಪುಟ್ಟಸ್ವಾಮಿ ಕೆ.ವಿ., ಗಿರೀಶ್ ಎಸ್. ಹಾಗೂ ಇಲಾಖೆಯ ಸಿಬ್ಬಂದಿಗಳಾದ ಸುರೇಶ, ಪುನೀತ್, ಮಹೇಶ ಹೆಚ್.ಜಿ. ಸೇರಿದಂತೆ ಇತರರು ಭಾಗವಹಿಸಿದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.