ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲೇನಹಳ್ಳಿ ಸಮೀಪದ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ಬಾಲ್ಯ ವಿವಾಹ ತಡೆಯಲು ತೆರಳಿದ್ದ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗಂಭೀರ ಘಟನೆ ಮಂಗಳವಾರ ನಡೆದಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಕ್ಕಪಡೆ ಅಧಿಕಾರಿಗಳಿಗೆ ಕಾಲೋನಿಯಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ತಕ್ಷಣವೇ ಮಲ್ಲೇನಹಳ್ಳಿ ಪಿಡಿಒ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ವಿವಾಹ ತಡೆಯಲು ಮುಂದಾಗಿದ್ದರು. ಈ ವೇಳೆ ಸ್ಥಳದಲ್ಲಿ ಜನಸಮೂಹ ಹೆಚ್ಚಾಗುತ್ತಿದ್ದ ಹಿನ್ನೆಲೆ ಭದ್ರತಾ ದೃಷ್ಟಿಯಿಂದ ಗ್ರಾಮಾಂತರ ಠಾಣೆಯ ಸಬ್ ಇನ್ಸೆಕ್ಟರ್ ರಘುನಾಥ್ ಎಸ್.ವಿ. ಹಾಗೂ ಜೀಪ್ ಚಾಲಕ ಸುನಿಲ್ ಕುಮಾರ್ ಸ್ಥಳಕ್ಕೆ ಆಗಮಿಸಿದ್ದರು.

ಅಧಿಕಾರಿಗಳು ಸಾರ್ವಜನಿಕರಿಗೆ ಬಾಲ್ಯ ವಿವಾಹದ ಕಾನೂನು ಹಾಗೂ ಅದರ ಪರಿಣಾಮಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾಗ, ಅಲ್ಲಿದ್ದ ಸಚಿನ್ (29) ಎಂಬಾತ ಏಕಾಏಕಿ ಸಬ್ ಇನ್ಸೆಕ್ಟರ್ ರಘುನಾಥ್ ಅವರನ್ನು ತಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎನ್ನಲಾಗಿದೆ.


ಇದನ್ನು ತಡೆಯಲು ಮುಂದಾದ ಪೊಲೀಸ್ ಜೀಪ್ ಚಾಲಕ ಸುನಿಲ್ ಕುಮಾರ್ ಅವರ ಮೇಲೆ ಆರೋಪಿ ಹಲ್ಲೆ ನಡೆಸಿದ್ದು, ಕೆನ್ನೆ ಹಾಗೂ ಮೈಕೈಗೆ ಹೊಡೆದಿದ್ದಲ್ಲದೆ, ಅವರು ಧರಿಸಿದ್ದ ಪೊಲೀಸ್ ಸಮವಸ್ತ್ರವನ್ನೂ ಹರಿದು ಹಾಕಿದ್ದಾನೆ ಎಂದು ತಿಳಿದುಬಂದಿದೆ.
ಹಲ್ಲೆಯ ಬಳಿಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಸಚಿನ್ ನಿಯಂತ್ರಣ ತಪ್ಪಿ ಕಾಲು ಜಾರಿ ಕೆಳಗೆ ಬಿದ್ದ ಪರಿಣಾಮ ತಲೆಗೆ ಗಾಯಗೊಂಡಿದ್ದಾನೆ. ಗಾಯಗೊಂಡ ಪೊಲೀಸ್ ಸಿಬ್ಬಂದಿ ಸುನಿಲ್ ಕುಮಾರ್ ಅವರಿಗೆ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದಡಿ ಸಚಿನ್ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.













