ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಹಣದಾಸೆಗೆ ಪೋಷಕರೇ ತಮ್ಮ ಮಗಳನ್ನು ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ವೇಶ್ಯಾವಾಟಿಕೆ ದಂಧೆಗೆ ಮಾರಾಟ ಮಾಡಿದ ಆರೋಪ ಕೇಳಿಬಂದಿದೆ. ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಸಮೀಪದ ಹಕ್ಕಿಪಿಕ್ಕಿ ಕಾಲೋನಿಯ ನಿವಾಸಿಗಳಾದ ಕ್ರಾಂತಿ ಹಾಗೂ ರಾಜಶೇಖರ್ ಅವರ ಪುತ್ರಿ ನಂದಿತಾ (20) ಈ ಪ್ರಕರಣದ ಸಂತ್ರಸ್ತೆಯಾಗಿದ್ದಾರೆ.
ಮಾಹಿತಿಯ ಪ್ರಕಾರ, ಗಿಡಮೂಲಿಕೆ ವ್ಯಾಪಾರದ ನೆಪದಲ್ಲಿ ಸುಮಾರು ನಾಲ್ಕು ತಿಂಗಳ ಹಿಂದೆ ಕುಟುಂಬವು ಸೆನೆಗಲ್‌ಗೆ ತೆರಳಿತ್ತು. ಸುಮಾರು ಹತ್ತು ದಿನಗಳ ಹಿಂದೆ ನಂದಿತಾಳನ್ನು ₹7 ಲಕ್ಷಕ್ಕೆ ವೇಶ್ಯಾವಾಟಿಕೆ ದಂಧೆಗೆ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಮಾರಾಟವಾದ ಬಳಿಕ ನಂದಿತಾ ಕಷ್ಟಪಟ್ಟು ಪರಿಚಯದವರನ್ನು ಸಂಪರ್ಕಿಸಿ, ತನ್ನ ತಂದೆ-ತಾಯಿಯೇ ಹಣಕ್ಕಾಗಿ ತನ್ನನ್ನು ಮಾರಾಟ ಮಾಡಿದ್ದಾರೆ ಎಂದು ತಿಳಿಸಿದ್ದಾಳೆ. ಅಲ್ಲದೆ, ತನಗೆ ಆಗಿರುವ ಅನ್ಯಾಯವನ್ನು ವಿವರಿಸಿ ವಿಡಿಯೋ ಸಂದೇಶವನ್ನೂ ಕಳುಹಿಸಿದ್ದಾಳೆ. ವಿಷಯ ಭಾರತೀಯ ರಾಯಭಾರ ಕಚೇರಿ (Indian Embassy) ಗಮನಕ್ಕೆ ಬಂದ ಬಳಿಕ, ಸ್ಥಳೀಯರ ಸಹಕಾರ ಹಾಗೂ ಸೆನೆಗಲ್ ಪೊಲೀಸರ ನೆರವಿನಿಂದ ನಂದಿತಾಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ನಂದಿತಾ ರಕ್ಷಿಸಲ್ಪಟ್ಟಿರುವ ವಿಚಾರ ತಿಳಿಯುತ್ತಿದ್ದಂತೆ ಸೆನೆಗಲ್‌ನಲ್ಲಿದ್ದ ಪೋಷಕರು ಭಾರತಕ್ಕೆ ಮರಳಿದ್ದಾರೆ ಎನ್ನಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘವು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಜಿತೇಂದ್ರ ಕುಮಾರ್ ದಯ್ಮಾ ಅವರಿಗೆ ದೂರು ಸಲ್ಲಿಸಿದೆ. ನಂದಿತಾಗೆ ನ್ಯಾಯ ಒದಗಿಸಿ, ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಸಂಘವು ಮನವಿ ಮಾಡಿದೆ.












