ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಅವರಿಗೆ ಸುಪ್ರೀಂಕೋರ್ಟ್ನಲ್ಲಿ ಭಾರಿ ಹಿನ್ನಡೆಯಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಪ್ರಾಣೇಶ್ ಅವರ ವಿಧಾನ ಪರಿಷತ್ ಸದಸ್ಯತ್ವವನ್ನು ರದ್ದುಗೊಳಿಸಿ ಮಹತ್ವದ ತೀರ್ಪು ನೀಡಿದೆ.
ಕಳೆದ ಚುನಾವಣೆಯಲ್ಲಿ ಎಂ.ಕೆ. ಪ್ರಾಣೇಶ್ ಕೇವಲ 6 ಮತಗಳ ಅಲ್ಪ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಫಲಿತಾಂಶವನ್ನು ಪ್ರಶ್ನಿಸಿ ಪರಾಜಿತ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಚುನಾವಣೆಯಲ್ಲಿ ನಾಮನಿರ್ದೇಶಿತ ಸದಸ್ಯರು ಮತ ಚಲಾಯಿಸಿರುವುದು ಕಾನೂನುಬಾಹಿರ ಎಂದು ಆರೋಪಿಸಿ ಗಾಯತ್ರಿ ಶಾಂತೇಗೌಡ ಕಾನೂನು ಹೋರಾಟ ಆರಂಭಿಸಿದ್ದರು. ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್ ಹಾಗೂ ಬಳಿಕ ಸುಪ್ರೀಂಕೋರ್ಟ್ ಮರು ಎಣಿಕೆಗೆ ಆದೇಶ ನೀಡಿದ್ದು, ಸುಮಾರು ಒಂದೂವರೆ ವರ್ಷದ ಹಿಂದೆ ಮತಗಳ ಮರು ಎಣಿಕೆ ನಡೆದಿತ್ತು.
ಸುಮಾರು ಮೂರೂವರೆ ವರ್ಷಗಳ ಕಾಲ ನಡೆದ ಸುದೀರ್ಘ ಕಾನೂನು ಹೋರಾಟದ ಬಳಿಕ ಸುಪ್ರೀಂಕೋರ್ಟ್ ಅಂತಿಮ ತೀರ್ಪು ಪ್ರಕಟಿಸಿದ್ದು, ಗಾಯತ್ರಿ ಶಾಂತೇಗೌಡ ಅವರ ವಾದವನ್ನು ಪುರಸ್ಕರಿಸಿದೆ. ಪರಿಣಾಮವಾಗಿ ಎಂ.ಕೆ. ಪ್ರಾಣೇಶ್ ಅವರ ವಿಧಾನ ಪರಿಷತ್ ಸದಸ್ಯತ್ವ ರದ್ದಾಗಿದ್ದು, ಅವರ ಸ್ಥಾನಕ್ಕೆ ಗಾಯತ್ರಿ ಶಾಂತೇಗೌಡ ಉಳಿದಿರುವ ಸುಮಾರು ಒಂದೂವರೆ ವರ್ಷದ ಅವಧಿಗೆ ನೂತನ ವಿಧಾನ ಪರಿಷತ್ ಸದಸ್ಯರಾಗಿ ಅಧಿಕಾರ ವಹಿಸಲಿದ್ದಾರೆ.












