ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಪ್ರತಿಭಾವಂತ ಯುವ ಪತ್ರಕರ್ತ, ಬರಹಗಾರ ಹಾಗೂ ಚಿತ್ರರಂಗದೊಂದಿಗೆ ನಂಟು ಹೊಂದಿದ್ದ ನಂದೀಶ್ ತೀರ್ಥಹಳ್ಳಿ (38) ಹೃದಯಾಘಾತದಿಂದ ನಿಧನರಾಗಿದ್ದಾರೆ. .
ಚಿಕ್ಕ ವಯಸ್ಸಿನಲ್ಲೇ ಪತ್ರಿಕೋದ್ಯಮ ಕ್ಷೇತ್ರಕ್ಕೆ ಕಾಲಿಟ್ಟ ನಂದೀಶ್, ತಮ್ಮ ಸರಳ ವ್ಯಕ್ತಿತ್ವ, ಪರಿಶ್ರಮ ಹಾಗೂ ವಿಶಿಷ್ಟ ಬರವಣಿಗೆಯ ಶೈಲಿಯಿಂದ ಗುರುತಿಸಿಕೊಂಡಿದ್ದರು. ಚಿತ್ತಾರದಲ್ಲಿ ವರದಿಗಾರರಾಗಿ ವೃತ್ತಿ ಆರಂಭಿಸಿದ್ದ ಅವರು ನಂತರ ಉಪಸಂಪಾದಕರ ಹಂತದವರೆಗೆ ಕೆಲಸ ನಿರ್ವಹಿಸಿದ್ದರು.

ನಂತರ ಯುವನಲ್ಲಿ ವಿಡಿಯೋ ಜಾಕಿಯಾಗಿ ಕಾರ್ಯನಿರ್ವಹಿಸಿದ ನಂದೀಶ್, ದೂರದರ್ಶನ ಹಾಗೂ ಮನರಂಜನಾ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದರು. ಜೀ ಕನ್ನಡನಲ್ಲಿ ಪ್ರಸಾರವಾದ ಜನಪ್ರಿಯ ‘ಪಾರು’ ಧಾರಾವಾಹಿಗೆ ಸ್ಕ್ರೀನ್ಪ್ಲೇ ರೈಟರ್ ಆಗಿ ಕೆಲಸ ಮಾಡಿದ್ದ ಅವರು, ಕನ್ನಡ ಚಿತ್ರರಂಗದಲ್ಲೂ ಸಂಭಾಷಣೆಕಾರರಾಗಿ ಗುರುತಿಸಿಕೊಂಡಿದ್ದರು.
ನಗರ ಜೀವನದ ಗದ್ದಲದಿಂದ ದೂರವಾಗಿ ತಮ್ಮ ಹುಟ್ಟೂರಾದ ತೀರ್ಥಹಳ್ಳಿಯಲ್ಲಿ ಕೃಷಿಯೊಂದಿಗೆ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದ ನಂದೀಶ್, ಸಾಹಿತ್ಯ, ಸಿನಿಮಾ ಮತ್ತು ಧಾರಾವಾಹಿ ಕ್ಷೇತ್ರದೊಂದಿಗೆ ನಿರಂತರ ಒಡನಾಟ ಹೊಂದಿದ್ದರು.
ಮೇ 20ರಂದು ಬೆಳಗ್ಗೆ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ನಂದೀಶ್ ಅವರನ್ನು ಆಸ್ಪತ್ರೆಗೆ ಸಾಗಿಸುವ ಮುನ್ನವೇ ತೀವ್ರ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ತಾಯಿ, ತಂಗಿ, ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ಅವರು ಅಗಲಿದ್ದಾರೆ. 2018ರಲ್ಲಿ ಹರ್ಷಿತಾ ಅವರನ್ನು ವಿವಾಹವಾಗಿದ್ದ ನಂದೀಶ್ ದಂಪತಿಗೆ ಜೇನು ಮತ್ತು ಗಂಧ ಎಂಬ ಇಬ್ಬರು ಮಕ್ಕಳಿದ್ದಾರೆ.














