
ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಡಿಸಿಸಿ) ಚುನಾವಣೆಯಲ್ಲಿ ಎನ್.ಡಿ.ಎ. ಮೈತ್ರಿಕೂಟ ಭರ್ಜರಿ ಜಯ ಸಾಧಿಸಿದ್ದು, ಕಾಂಗ್ರೆಸ್ ಪಕ್ಷ ಭಾರೀ ಸೋಲು ಅನುಭವಿಸಿದೆ. ಒಟ್ಟು 13 ನಿರ್ದೇಶಕ ಸ್ಥಾನಗಳಲ್ಲಿ 11 ಸ್ಥಾನಗಳನ್ನು ಬಿಜೆಪಿ ಪಡೆದುಕೊಂಡರೆ, ಜೆಡಿಎಸ್ 2 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಕಾಂಗ್ರೆಸ್‌ಗೆ ಈ ಚುನಾವಣೆಯಲ್ಲಿ ಒಂದು ಸ್ಥಾನವೂ ಲಭಿಸದೆ ನೆಲಕಚ್ಚಿದೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಚುನಾವಣೆಯಲ್ಲಿ ಹಾಲಿ ಕಾಂಗ್ರೆಸ್ ಶಾಸಕ ಕಡೂರಿನ ಕೆ.ಎಸ್. ಆನಂದ್ ಅವರಿಗೆ ಭಾರೀ ಸೋಲು ಎದುರಾಗಿದ್ದು, ಕೊಪ್ಪದ ಬಿಜೆಪಿ ಮುಖಂಡ ದಿನೇಶ್ ಹೊಸೂರು ವಿರುದ್ಧ ಪರಾಭವಗೊಂಡಿದ್ದಾರೆ. ವ್ಯವಸಾಯೋತ್ಪನ್ನ ಸಹಕಾರ ಸಂಘದಿಂದ ಸ್ಪರ್ಧಿಸಿದ್ದ ಕೆ.ಎಸ್. ಆನಂದ್ ಸೋಲು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜಿಲ್ಲೆಯಲ್ಲೇ ಐದು ಕಾಂಗ್ರೆಸ್ ಶಾಸಕರಿದ್ದರೂ ಸಹ ಪಕ್ಷದ ಅಭ್ಯರ್ಥಿಗಳು ಸೋಲು ಕಂಡಿರುವುದು ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.

ಮೂಡಿಗೆರೆ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರಿಗೂ ಈ ಚುನಾವಣೆಯಲ್ಲಿ ಸೋಲು ಕಾದಿದ್ದು, ಪ್ರಾಥಮಿಕ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ಗಳ ಸಹಕಾರ ಸಂಘದಿಂದ ಸ್ಪರ್ಧಿಸಿದ್ದರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ.
ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ ನಡೆದ ಮತ ಎಣಿಕೆ ವೇಳೆ ತೀವ್ರ ಕುತೂಹಲ ನಿರ್ಮಾಣವಾಗಿತ್ತು. ಪ್ರಮುಖ ಹೋರಾಟದಲ್ಲಿ ಸಿ.ಟಿ. ರವಿ ಹಾಗೂ ಎಸ್.ಎಲ್. ಭೋಜೇಗೌಡ ಅವರು ಜಯ ಸಾಧಿಸಿದ್ದಾರೆ. ಮತ ಎಣಿಕೆಯ ಫಲಿತಾಂಶದಲ್ಲಿ ಸಿ.ಟಿ. ರವಿಗೆ 27 ಮತಗಳು, ಎಸ್.ಎಲ್. ಭೋಜೇಗೌಡ ಅವರಿಗೆ 30 ಮತಗಳು ಲಭಿಸಿದರೆ, ಬಿಜೆಪಿ ರೆಬಲ್ ಅಭ್ಯರ್ಥಿ ನಿರಂಜನ್ ಅವರಿಗೆ 5 ಮತಗಳು ಮಾತ್ರ ದೊರಕಿವೆ.
ಒಟ್ಟು 13 ನಿರ್ದೇಶಕರ ಸ್ಥಾನಗಳಲ್ಲಿ 8 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 5 ಕ್ಷೇತ್ರಗಳಿಗೆ ಮಾತ್ರ ಚುನಾವಣೆ ನಡೆದಿತ್ತು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಚಿಕ್ಕಮಗಳೂರು ನಗರದ ಡಿಸಿಸಿ ಬ್ಯಾಂಕ್ ಎದುರು ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.
ಕಾಫಿನಾಡಿನ ರಾಜಕೀಯ ಚಿತ್ರಣವನ್ನೇ ಬದಲಿಸಿದ ಈ ಡಿಸಿಸಿ ಬ್ಯಾಂಕ್ ಚುನಾವಣೆ, ಮುಂದಿನ ದಿನಗಳಲ್ಲಿ ಜಿಲ್ಲೆಯ ರಾಜಕೀಯದ ಮೇಲೆ ಮಹತ್ವದ ಪರಿಣಾಮ ಬೀರುವ ನಿರೀಕ್ಷೆ ವ್ಯಕ್ತವಾಗಿದೆ.



















