ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಕರ್ನಾಟಕದ ನಕ್ಸಲರ ಪೈಕಿ ಶರಣಾಗದೆ ಉಳಿದಿದ್ದ ಏಕೈಕ ನಕ್ಸಲ್ ಕೋಟೆಹೊಂಡ ರವೀಂದ್ರ ನಿನ್ನೆ ತಡರಾತ್ರಿ ಶರಣಾಗಿದ್ದಾನೆ.
ನಿನ್ನೆ ತಡರಾತ್ರಿ ಸುಮಾರು 12 ಗಂಟೆ ಸುಮಾರಿಗೆ ಶೃಂಗೇರಿ ತಾಲ್ಲೂಕಿನ ಗೌಪ್ಯ ಸ್ಥಳದಲ್ಲಿ ನಕ್ಸಲ್ ಶರಣಾಗತಿ ಸಮಿತಿ ಸಂಪರ್ಕಕ್ಕೆ ಸಿಕ್ಕಿದ್ದು ಇಂದು ಸಮಿತಿ ಮೂಲಕ ಜಿಲ್ಲಾಡಳಿತದ ಮುಂದೆ ಶರಣಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಕ್ರಂ ಗೌಡ ಎನ್ ಕೌಂಟರ್ ಬಳಿಕ ಸರ್ಕಾರದ ಪ್ಯಾಕೇಜ್ ಒಪ್ಪಿ 6 ಮಂದಿ ನಕ್ಸಲರು ಜನವರಿ 8 ರಂದು ಮುಖ್ಯವಾಹಿನಿಗೆ ಬಂದಿದ್ದರು. ಆದರೆ ಈ ತಂಡದಲ್ಲಿದ್ದ ಕೋಟೆಹೊಂಡ ರವೀಂದ್ರ ಮಾತ್ರ ಭೂಗತನಾಗಿಯೇ ಉಳಿದಿದ್ದ. ಕೋಟೆಹೊಂಡ ರವೀಂದ್ರ ಶರಣಾಗತಿಗೆ ಪೊಲೀಸ್ ಇಲಾಖೆ ಸೇರಿದಂತೆ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಕೂಡ ಸಾಕಷ್ಟು ಶ್ರಮ ವಹಿಸಿತ್ತು. ಇದೀಗ ನಿನ್ನೆ ಶೃಂಗೇರಿಯಲ್ಲಿ ಶರಣಾಗಿದ್ದಾನೆ.

ನನ್ನ ಅಣ್ಣ ರವೀಂದ್ರ ಶರಣಾಗುವುದು ನಮಗೆ ಸಂತೋಷ ತಂದಿದೆ. ಮುಖ್ಯವಾಹಿನಿಗೆ ಬಂದು ಸಂವಿಧಾನಾತ್ಮಕವಾಗಿ ಹೋರಾಟ ಮಾಡಲು ಸಾಕಷ್ಟು ದಾರಿಗಳಿವೆ. ಅದರ ಮೂಲಕ ಅವರು ಹೋರಾಟ ಮಾಡಲಿ. ನಾವು ಅವನನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸುತ್ತೇವೆ. – ಸುರೇಂದ್ರ, ಕೋಟೆಹೊಂಡ ರವೀಂದ್ರ ಸಹೋದರ
ಯಾರು ಈ ರವೀಂದ್ರ..?
ಶೃಂಗೇರಿ ತಾಲ್ಲೂಕಿನ ಕಿಗ್ಗಾ ಸಮೀಪದ ಕೋಟೆಹೊಂಡ (ಮರಾಠಿ ಕಾಲೋನಿ) ಎಂಬ ಊರಿನವನು. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಕಿಗ್ಗಾ ಸಮೀಪದ ಕೋಟೆಹೊಂಡ ರವೀಂದ್ರ 2007 ರಲ್ಲಿ ಎಳ್ಳಮಾಸ್ಯೆ ಜಾತ್ರೆ ಸಮಯದಲ್ಲಿ ರವೀಂದ್ರ ಮನೆ ಬಿಟ್ಟಿದ್ದು, ಬಳಿಕ ಹಿಂದಿರುಗಿರಲಿಲ್ಲ. ಕೆಲವು ದಿನಗಳ ಬಳಿಕ ಈತ ನಕ್ಸಲ್ ತಂಡ ಸೇರಿದ್ದು ಬಹಿರಂಗವಾಗಿತ್ತು. ಈತನ ಸುಳಿವು ನೀಡಿದವರಿಗೆ ಪೊಲೀಸ್ ಇಲಾಖೆ ಒಂದು ಲಕ್ಷ ರೂ. ಬಹುಮಾನವನ್ನು ಘೋಷಿಸಿತ್ತು. ಈತನ ಮೇಲೆ ಶೃಂಗೇರಿ ಪೊಲೀಸ್ ಠಾಣೆಯಲ್ಲಿ 15 ಪ್ರಕರಣ, ಕೇರಳ, ಹೆಬ್ರಿ, ದಕ್ಷಿಣ ಕನ್ನಡದಲ್ಲಿ ಸೇರಿ 30 ಪ್ರಕರಣಗಳಿವೆ ಎಂದು ಮೂಲಗಳು ತಿಳಿಸಿವೆ.
ಇಂದು ಜಿಲ್ಲಾಡಳಿತದ ಮುಂದೆ ಹಾಜರು
ನಿನ್ನೆ ತಡರಾತ್ರಿ ಶರಣಾಗಿರುವ ನಕ್ಸಲ್ ಕೋಟೆಹೊಂಡ ರವೀಂದ್ರ ಇಂದು ಸುಮಾರು 11:30ರ ಸುಮಾರಿಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಮುಂದೆ ಹಾಜರಾಗಲಿದ್ದಾರೆ. ಈ ಬಳಿಕ ಮುಂದಿನ ಪ್ರಕ್ರಿಯೆಗಳು ನಡೆಯಲಿವೆ.












