ಉಡುಪಿ/ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕೇರಳ, ತಮಿಳುನಾಡು, ಕರ್ನಾಟಕಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ನಕ್ಸಲ್ ವಿಕ್ರಂ ಗೌಡ ಹತ್ಯೆಯಾಗಿದ್ದಾನೆ. ನಕ್ಸಲ್ ನಿಗ್ರಹ ಪಡೆ ನಡೆಸಿದ ಕಾರ್ಯಾಚಾರಣೆಯಲ್ಲಿ ಎನ್ ಕೌಂಟರ್ ಆಗಿ ಹತ್ಯೆಯಾಗಿದ್ದಾನೆ. ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಹಲವು ಪ್ರಕರಣದಲ್ಲಿ ಪೊಲೀಸರು ಈತನಿಗಾಗಿ ಹುಡುಕಾಡುತ್ತಿದ್ದರು. ವಿಕ್ರಂ ಗೌಡ ನಕ್ಸಲ್ ದಳದ ನೇತ್ರಾವತಿ ಗುಂಪಿನ ನಾಯಕ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ. ಇದಲ್ಲದೆ ಹಲವು ನಕ್ಸಲ್ ಚಟುವಟಿಕೆಗಳಿಗೆ ನೇತೃತ್ವ ವಹಿಸಿದ್ದ.
ಹತ್ತು ವರ್ಷಗಳ ಹಿಂದೆಯೇ ಈತನ ಪತ್ತೆಗೆ ಪೊಲೀಸರು 5 ಲಕ್ಷ ರೂ. ಬಹುಮಾನ ಘೋಷಿಸಿತ್ತು. ಕಳೆದ 18 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಈತನ ಮೇಲೆ ಕೇರಳ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸುಮಾರು 50 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಕೇರಳದಲ್ಲಿ ಇತ್ತೀಚೆಗೆ ನಕ್ಸಲ್ ಚಟುವಟಿಕೆಗಳು ಹೆಚ್ಚಾಗಿತ್ತು. ಅಲ್ಲಿ ಪೊಲೀಸ್ ಕಾರ್ಯಾಚರಣೆ ಚುರುಕಾಗುತ್ತಿದ್ದಂತೇ ಈ ತಂಡ ಕರ್ನಾಟಕಕ್ಕೆ ಬಂದಿತ್ತು. ಈ ಹಿನ್ನಲೆಯಲ್ಲಿ ನಕ್ಸಲ್ ನಿಗ್ರಹ ಪಡೆ ಉಡುಪಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಚಟುವಟಿಕೆ ಚುರುಕುಗೊಳಿಸಿತ್ತು. ಇದೀಗ ಉಡುಪಿ ಜಿಲ್ಲೆಯಲ್ಲಿ ನಡೆಸಿದ ಎನ್ ಕೌಂಟರ್ ನಲ್ಲಿ ವಿಕ್ರಂ ಗೌಡ ಕತೆ ಮುಗಿದಿದೆ.

ಕುದುರೆಮುಖ ಹೋರಾಟದಲ್ಲಿ ಆರಂಭವಾಗಿದ್ದ ನಕ್ಸಲ್ ಚಟುವಟಿಕೆ
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆ ವಿರೋಧಿಸಿ ಹುಟ್ಟಿಕೊಂಡಿದ್ದ ನಕ್ಸಲ್ ಚಳುವಳಿ, ನಂತರ ಕರ್ನಾಟಕದ ವಿವಿಧ ಭಾಗಗಳಲ್ಲಿ ದಶಕಗಳ ಕಾಲ ಆತಂಕ ಸೃಷ್ಟಿ ಮಾಡಿತ್ತು. ಆದರೆ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆಯಾದ ಬಳಿಕ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ನಕ್ಸಲ್ ಚಳವಳಿಗೆ ಹೆಚ್ಚಿನ ಬೆಂಬಲ ಸಿಕ್ಕಿರಲಿಲ್ಲ. ಹೀಗಾಗಿ ಪಕ್ಕದ ರಾಜ್ಯ ಕೇರಳಕ್ಕೆ ನಕ್ಸಲರು ಸ್ಥಳಾಂತರಗೊಂಡಿದ್ದರು. ಇದೀಗ ಮತ್ತೆ ಕಸ್ತೂರಿ ರಂಗನ್ ವರದಿ ಜಾರಿ, ಅರಣ್ಯ ಒತ್ತುವರಿ ತೆರವು ವಿಚಾರವಾಗಿ ನಕ್ಸಲರು ಸಭೆಗಳನ್ನು ನಡೆಸಿ, ಚಟುವಟಿಕೆ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ.
ಯಾರು ಈ ವಿಕ್ರಂ ಗೌಡ?
ವಿಕ್ರಂ ಗೌಡ ನಕ್ಸಲರ ನೇತ್ರಾವತಿ ದಳದ ನಾಯಕ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ. ಆ ಸಂದರ್ಭದಲ್ಲಿ ನಕ್ಸಲ್ ಚಳವಳಿಗೆ ಧುಮುಕಿದ್ದ ವಿಕ್ರಂ ಗೌಡ, ನಂತರದಲ್ಲಿ ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ನಕ್ಸಲ್ ಹೋರಾಟದ ವೇಳೆ ಕರಾವಳಿ ಭಾಗದಲ್ಲಿ ನೇತ್ರಾವತಿ ದಳವನ್ನು ಮುನ್ನೆಡೆಸಿದ್ದ. ಮತ್ತೊಂದೆಡೆ, ಮಲೆನಾಡು ಭಾಗದಲ್ಲಿ ಮುಂಡಗಾರು ಲತಾ ತಂಡ ಸಕ್ರಿಯವಾಗಿತ್ತು.
5 ಲಕ್ಷ ಬಹುಮಾನ ಘೋಷಿಸಿದ್ದ ಇಲಾಖೆ
ನಕ್ಸಲರ ಪತ್ತಗೆ ಪೋಲಿಸ್ ಇಲಾಖೆ ಹತ್ತು ವರ್ಷಗಳ ಹಿಂದೆಯೇ 5 ಲಕ್ಷ ರೂ. ಬಹುಮಾನ ಘೋಷಣೆ ಮಾಡಿತ್ತು. ವಿಕ್ರಂ ಗೌಡ, ಮುಂಡಗಾರು ಲತಾ, ಜಯಣ್ಣ, ವನಜಾಕ್ಷಿ, ಸುಂದರಿ ಪತ್ತೆಗೆ 5 ಲಕ್ಷ ಬಹುಮಾನ ಘೋಷಣೆ ಮಾಡಲಾಗಿತ್ತು. ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ಹೇಳಿತ್ತು. ಕಳೆದ 18 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದ ವಿಕ್ರಂ ಗೌಡ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯಲ್ಲೇ 13 ಪ್ರಕರಣ ದಾಖಲಾಗಿದ್ದವು. ಕರ್ನಾಟಕ ತಮಿಳುನಾಡು, ಕೇರಳದ ರಾಜ್ಯದಲ್ಲಿ 50 ಕ್ಕೂ ಹೆಚ್ಚು ಕೇಸ್ ದಾಖಲಾಗಿದ್ದವು.
ಕಳಚಿದ ನಕ್ಸಲ್ ಹೋರಾಟದ ಪ್ರಮುಖ ಕೊಂಡಿ
ಈ ಹಿಂದೆ ಕೇರಳದ ಸುಲ್ತಾನ್ ಬತ್ತೇರಿಯಲ್ಲಿ ಶೃಂಗೇರಿ ಮೂಲದ ನಕ್ಸಲ್ ನಾಯಕ ಬಿಜಿ ಕೃಷ್ಣಮೂರ್ತಿ ಹಾಗೂ ಸಾವಿತ್ರಿಯನ್ನು ಬಂಧಿಸಿದ್ದರು. ಅದಾದ ಬಳಿಕ ಹೊಸಗದ್ದೆ ಪ್ರಭಾ ಕೂಡ ಬಂಧನವಾಗಿತ್ತು. ಇದಾದ ಬಳಿಕ ಕೇರಳದ ಥಂಡರ್ ಬೋಲ್ಟ್ ಪಡೆ ಕಾರ್ಯಾಚರಣೆಗಿಳಿದಿತ್ತು. ಝೋನಲ್ ಸೆಕ್ರೆಟರಿಯಾಗಿದ್ದ ಬಿಜಿಕೆ ಬಂಧನದ ನಂತರ ಈ ಭಾಗದ ನಕ್ಸಲ್ ತಂಡವನ್ನು ಮುನ್ನಡೆಸಲು ನಾಯಕರ ಕೊರತೆ ಕೂಡ ಇತ್ತು. ಕಳೆದ ಒಂದು ವರ್ಷದ ಹಿಂದೆ ಮೂಡಿಗೆರೆಯ ಸುರೇಶ್ ಕೂಡ ಅರೆಸ್ಟ್ ಆಗಿದ್ದ. ಇದೀಗ ಉಡುಪಿಯ ಪೀತೆಬೈಲ್ ನಲ್ಲಿ ಎನ್ ಕೌಂಟರ್ ಮಾಡಲಾಗಿದೆ.
ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ಕೇಸ್ ಗೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ವಿಕ್ರಂನನ್ನು ಪೊಲೀಸರು ಹುಡುಕುತ್ತಿದ್ದರು. ಆದರೆ ವಿಕ್ರಂ ತಪ್ಪಿಸಿಕೊಂಡು ಓಡಾಡುತ್ತಿದ್ದ. ಅನೇಕ ಎನ್‌ಕೌಂಟರ್‌ಗಳಲ್ಲಿ ವಿಕ್ರಂ ಗೌಡ ತಪ್ಪಿಸಿಕೊಂಡಿದ್ದ. ಸೋಮವಾರ ಸಂಜೆ ವಿಕ್ರಂ ಗೌಡ ಎನ್‌ಕೌಂಟರ್ ಆಗಿದೆ. ಸೋಮವಾರ ಪೊಲೀಸರ ಮೇಲೆ ವಿಕ್ರಂ ಶೂಟ್ ಮಾಡಿದ್ದ. ಪೊಲೀಸರು ಪ್ರತಿದಾಳಿ ನಡೆಸಿ ಎನ್‌ಕೌಂಟರ್ ಮಾಡಿದ್ದಾರೆ. ವಿಕ್ರಂ ಜೊತೆಯಲ್ಲಿದ್ದ ಇಬ್ಬರು ಮೂವರು ಓಡಿ ಹೋಗಿದ್ದಾರೆ. ಆ ಭಾಗದಲ್ಲಿ ಕೂಂಬಿಂಗ್ ಮುಂದುವರಿದಿದೆ. ವಿಕ್ರಂ ಗೌಡ ಸಕ್ರಿಯರಾಗಿದ್ದ ಎಂದು ಪೊಲೀಸರು ಆತನನ್ನು ಹುಡುಕುತ್ತಿದ್ದರು ಎಂದರು.












