ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ಹೆತ್ತ ತಾಯಿಯ ಮೊಬೈಲ್ ಗೆ ಮಗಳ ಅಶ್ಲೀಲ ಚಿತ್ರಗಳನ್ನು ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಎಂಬಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿ ಬೆಂಗಳೂರು ಮೂಲದ ಯುವಕನೊಬ್ಬನ ವಿರುದ್ಧ ಚಿಕ್ಕಮಗಳೂರು ಸೆನ್ (CEN) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಮೂಲದ ಯೋಗೀಶ್ ಎಂಬಾತನೇ ಹಣಕ್ಕೆ ಬೆದರಿಕೆ ಹಾಕುತ್ತಿರುವ ಆರೋಪಿಯಾಗಿದ್ದಾನೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಮೂಲದ ಮಹಿಳೆಯೊಬ್ಬರಿಗೆ ಬೆಂಗಳೂರಿನ ಯೋಗೀಶ್ ಎಂಬಾತ ಕರೆ ಮಾಡಿದ್ದಲ್ಲದೆ, ಆಕೆಯ 25 ವರ್ಷದ ಮಗಳ ಅಶ್ಲೀಲ ಫೋಟೋಗಳನ್ನು ವಾಟ್ಸಾಪ್‌ಗೆ ಕಳುಹಿಸಿದ್ದಾನೆ. ಇದರ ಬೆನ್ನಲ್ಲೇ ಮಹಿಳೆಯ ಬಳಿ ದೊಡ್ಡ ಮೊತ್ತದ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಒಂದು ವೇಳೆ ಹಣ ನೀಡದೇ ಹೋದರೆ, ಈ ಅಶ್ಲೀಲ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಮಗಳ ಮಾನ ಹರಾಜು ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ. ಆರೋಪಿ ಯೋಗೀಶ್ ತಡರಾತ್ರಿ ಮಹಿಳೆಗೆ ಫೋನ್ ಮಾಡಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಹಾಗೂ ಹಣ ಕೊಡುವಂತೆ ನಿರಂತರವಾಗಿ ಪೀಡಿಸುತ್ತಿದ್ದ ಎಂದು ತಿಳಿದುಬಂದಿದೆ.

ಆರೋಪಿಯ ನಿರಂತರ ಕಿರುಕುಳದಿಂದ ನೊಂದ ಮಹಿಳೆ ತಕ್ಷಣವೇ ಚಿಕ್ಕಮಗಳೂರು ಸೆನ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಸೆನ್ ಸೈಬರ್ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿ ಯೋಗೀಶ್ ಪತ್ತೆಗಾಗಿ ಬಲೆ ಬೀಸಿದ್ದಾರೆ.













