ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ (ESA)ಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಪ್ರಕಟಿಸಿರುವ ಹೊಸ ಕರಡು ಅಧಿಸೂಚನೆ ಮಲೆನಾಡು ಭಾಗದ ರೈತರು ಮತ್ತು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ ಎಂದು ಮಲೆನಾಡು ಕರಾವಳಿ ಜನಪರ ಒಕ್ಕೂಟದ ರಾಜ್ಯ ಸಂಚಾಲಕ ಅನಿಲ್ ಹೊಸಕೊಪ್ಪ ತಿಳಿಸಿದ್ದಾರೆ.
ಈಗಿರುವ ಅರಣ್ಯ ಕಾನೂನುಗಳೇ ರೈತರ ಬದುಕಿಗೆ ಸಂಕಷ್ಟ ಉಂಟುಮಾಡಿವೆ. ಇಂತಹ ಸಂದರ್ಭದಲ್ಲಿ ಹೊಸ ಕರಡು ಅಧಿಸೂಚನೆಯಿಂದ ಮಲೆನಾಡಿನ ಸಾವಿರಾರು ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿಸುವ ಪ್ರಸ್ತಾಪ ಮಾಡಿರುವುದು ಜನರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಆರು ಜಿಲ್ಲೆಗಳ ಸಂಸದರು ಕೂಡಲೇ ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು. ಇಲ್ಲವಾದರೆ ಮಲೆನಾಡು ಕರಾವಳಿ ಜನಪರ ಒಕ್ಕೂಟದ ವತಿಯಿಂದ ಸಂಸದರ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಕರಡು ಅಧಿಸೂಚನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ 556, ಶಿವಮೊಗ್ಗ ಜಿಲ್ಲೆಯ 446, ಚಿಕ್ಕಮಗಳೂರು ಜಿಲ್ಲೆಯ 137, ಕೊಡಗು ಜಿಲ್ಲೆಯ 53, ದಕ್ಷಿಣ ಕನ್ನಡ ಜಿಲ್ಲೆಯ 43 ಹಾಗೂ ಉಡುಪಿ ಜಿಲ್ಲೆಯ 34 ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿಸುವ ಪ್ರಸ್ತಾಪ ಮಾಡಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಪಶ್ಚಿಮ ಘಟ್ಟ ವ್ಯಾಪ್ತಿಯ ಹಲವು ಗ್ರಾಮಗಳು ಈ ಪಟ್ಟಿಯಲ್ಲಿವೆ ಎಂದು ತಿಳಿಸಿದ್ದಾರೆ.

ಸಾರ್ವಜನಿಕರು, ರೈತರು, ಗ್ರಾಮ ಪಂಚಾಯಿತಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳು ಅಧಿಸೂಚನೆ ಪ್ರಕಟಗೊಂಡ ದಿನಾಂಕದಿಂದ 60 ದಿನಗಳೊಳಗೆ ತಮ್ಮ ಆಕ್ಷೇಪಣೆ ಅಥವಾ ಸಲಹೆಗಳನ್ನು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಲಿಖಿತ ರೂಪದಲ್ಲಿ ಅಥವಾ esz-mef@nic.in ಇ-ಮೇಲ್ ಮೂಲಕ ಸಲ್ಲಿಸಬಹುದಾಗಿದೆ. ಅಂತಿಮ ಅಧಿಸೂಚನೆ ಪ್ರಕಟಿಸುವ ಮೊದಲು ಈ ಅಭಿಪ್ರಾಯಗಳನ್ನು ಪರಿಗಣಿಸಲಾಗುವುದು ಎಂದು ಸಚಿವಾಲಯ ತಿಳಿಸಿರುವುದರಿಂದ ಮಲೆನಾಡಿನ ನೆಲವಾಸಿಗಳು ಎಚ್ಚೆತ್ತುಕೊಂಡು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬೇಕು ಎಂದು ಅನಿಲ್ ಹೊಸಕೊಪ್ಪ ಮನವಿ ಮಾಡಿದ್ದಾರೆ.

ಈಗಿರುವ ಅರಣ್ಯ ಕಾನೂನುಗಳೇ ರೈತರ ಉಸಿರು ಗಟ್ಟಿಸಿವೆ. ಮಲೆನಾಡಿನ ಜನರ ಬದುಕಿನ ಪ್ರಶ್ನೆಯಲ್ಲಿ ಆರು ಜಿಲ್ಲೆಗಳ ಸಂಸದರು ಕೂಡಲೇ ಮಧ್ಯಪ್ರವೇಶಿಸಬೇಕು. ಇಲ್ಲದಿದ್ದರೆ ಮಲೆನಾಡು ಕರಾವಳಿ ಜನಪರ ಒಕ್ಕೂಟದಿಂದ ಸಂಸದರ ಕಚೇರಿ ಎದುರು ಧರಣಿ ನಡೆಸಲಾಗುವುದು. – ಅನಿಲ್ ಹೊಸಕೊಪ್ಪ, ರಾಜ್ಯ ಸಂಚಾಲಕರು, ಮಲೆನಾಡು ಕರಾವಳಿ ಜನಪರ ಒಕ್ಕೂಟ
ಈ ಕುರಿತು ಪ್ರತಿಕ್ರಿಯಿಸಿರುವ ಮಲೆನಾಡು ಕರಾವಳಿ ಜನಪರ ಒಕ್ಕೂಟದ ರಾಜ್ಯ ಸಂಚಾಲಕ ಅನಿಲ್ ಹೊಸಕೊಪ್ಪ, ರಾಜ್ಯದ ಜನತೆಯ ವಿರೋಧ, ವಿಧಾನಸಭೆಯಲ್ಲಿ ಅಂಗೀಕರಿಸಿದ ನಿರ್ಣಯ, ರಾಜ್ಯ ಸರ್ಕಾರದ ಹಲವು ಮನವಿಗಳನ್ನು ಕಡೆಗಣಿಸಿ ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಪಶ್ಚಿಮ ಘಟ್ಟ ವ್ಯಾಪ್ತಿಯ ಜನವಸತಿ ಪ್ರದೇಶಗಳನ್ನು ‘ಪರಿಸರ ಸೂಕ್ಷ್ಮ ಪ್ರದೇಶ (ESA)’ ಎಂದು ಗುರುತಿಸಿ ಏಳನೇ ಬಾರಿಗೆ ಹೊಸ ಕರಡು ಅಧಿಸೂಚನೆ ಪ್ರಕಟಿಸಿರುವುದು ಖಂಡನೀಯ ಎಂದು ಹೇಳಿದ್ದಾರೆ.
ಕಸ್ತೂರಿರಂಗನ್ ವರದಿ ಆಧರಿಸಿ ರಾಜ್ಯದ ಪಶ್ಚಿಮ ಘಟ್ಟ ವ್ಯಾಪ್ತಿಯ 10 ಜಿಲ್ಲೆಗಳ 20,668 ಚದರ ಕಿಲೋಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದ್ದು, ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಲಾಗಿದೆ. ಆದರೆ ಮೊದಲ ಕರಡು ಅಧಿಸೂಚನೆಯಲ್ಲಿ ಇದ್ದಷ್ಟೇ ಪ್ರದೇಶವನ್ನು ಈಗಲೂ ಉಳಿಸಿಕೊಳ್ಳಲಾಗಿದೆ. ಗ್ರಾಮ ಪಂಚಾಯಿತಿಗಳು, ಸಾವಿರಾರು ನಾಗರಿಕರು, ಜನಪ್ರತಿನಿಧಿಗಳು ಹಾಗೂ ರಾಜ್ಯ ಸರ್ಕಾರ ಸಲ್ಲಿಸಿರುವ ಮನವಿಗಳ ನಡುವೆಯೂ ಒಂದೇ ಒಂದು ಚದರ ಕಿಲೋಮೀಟರ್ ಪ್ರದೇಶವನ್ನೂ ಕಡಿಮೆ ಮಾಡದಿರುವುದು ಜನಾಭಿಪ್ರಾಯಕ್ಕೆ ಅಗೌರವ ತೋರಿದಂತಾಗಿದೆ ಎಂದು ಅವರು ಆರೋಪಿಸಿದರು.












