ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ವಲಯ (ESA) ಘೋಷಣೆಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಪ್ರಕಟಿಸಿರುವ ಹೊಸ ಕರಡು ಅಧಿಸೂಚನೆ ಮಲೆನಾಡು ಭಾಗದ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ ಎಂದು ಬಾಳೆಹೊನ್ನೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರತನ್ ಗೌಡ ಅರಗಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕರಡು ಅಧಿಸೂಚನೆಯಿಂದ ರೈತರ ಬದುಕಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದ್ದು, ಈ ಕೂಡಲೇ ಕೇಂದ್ರ ಸರ್ಕಾರ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳದಿದ್ದರೆ ಉಡುಪಿ–ಚಿಕ್ಕಮಗಳೂರು ಸಂಸದರ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕರಡು ಅಧಿಸೂಚನೆಯ ಅನುಬಂಧ–’ಸಿ’ಯಲ್ಲಿ ಕರ್ನಾಟಕದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಪಶ್ಚಿಮ ಘಟ್ಟ ವ್ಯಾಪ್ತಿಯ ಸಾವಿರಾರು ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿಸುವ ಪ್ರಸ್ತಾಪ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ 137 ಗ್ರಾಮಗಳು ಈ ಪಟ್ಟಿಯಲ್ಲಿ ಸೇರಿದ್ದು, ವಿಶೇಷವಾಗಿ ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ ಹಾಗೂ ನರಸಿಂಹರಾಜಪುರ ತಾಲೂಕುಗಳ ವ್ಯಾಪ್ತಿಯ ಗ್ರಾಮಗಳು ಹೆಚ್ಚಿನ ಪರಿಣಾಮ ಎದುರಿಸಲಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಗಮನ ಹರಿಸದೆ ನಿರ್ಲಕ್ಷ್ಯ ವಹಿಸುತ್ತಿರುವ ಉಡುಪಿ–ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವಾದರೆ ಮಲೆನಾಡಿನ ರೈತರ ಪರವಾಗಿ ನಿಂತು ನ್ಯಾಯ ದೊರಕಿಸುವ ಕೆಲಸ ಮಾಡಬೇಕು ಎಂದು ರತನ್ ಗೌಡ ಒತ್ತಾಯಿಸಿದ್ದಾರೆ.
ಪ್ರಸ್ತುತ ಜಾರಿಯಲ್ಲಿರುವ ಅರಣ್ಯ ಕಾನೂನುಗಳೇ ರೈತರ ಬದುಕನ್ನು ಸಂಕಷ್ಟಕ್ಕೆ ತಳ್ಳಿವೆ. ಇದೀಗ ಹೊಸ ಕರಡು ಅಧಿಸೂಚನೆಯಿಂದ ಮತ್ತಷ್ಟು ಸಮಸ್ಯೆಗಳು ಎದುರಾಗುವ ಆತಂಕವಿದ್ದು, ಸಂಬಂಧಪಟ್ಟ ಜನಪ್ರತಿನಿಧಿಗಳು ಮೌನ ವಹಿಸಿರುವುದು ವಿಷಾದನೀಯ ಎಂದು ಅವರು ಟೀಕಿಸಿದ್ದಾರೆ.
ಕರಡು ಅಧಿಸೂಚನೆಯಲ್ಲಿ ನರಸಿಂಹರಾಜಪುರ ತಾಲೂಕಿನ ಅಳೆಹಳ್ಳಿ, ಬಾಳೆ, ವಗಡೆ, ಅರಳಿಕೊಪ್ಪ, ಗುಬ್ಬಿಗ, ಬೆಳ್ಳೂರು, ಬೈರಾಪುರ, ದಂಡುಬಿಟ್ಟಹಾರ, ದಾವಣ, ಹಲಸೂರು, ಆರಂಬಳ್ಳಿ, ಹರಾವರಿ, ಹಾತುರು, ಹೆಬ್ಬೆ, ಹೊಸೂರು, ಕಡಹಿನಬೈಲು, ಕೊನೋಡಿ, ಕಾನೂರು, ಕರ್ಕೇಶ್ವರ, ಕೋಣಕೆರೆ, ಕುಸುಬೂರು, ಮಡಬೂರು, ಮಲ್ಲಂದೂರು, ಮೇಗರಮಕ್ಕಿ, ಮುದುಗುಣಿ, ನಂದಿಗಾವಿ, ಸಾಲೂರು, ಸಂಕಸೆ, ಸಾರ್ಯ, ವರ್ಕಟೆ ಹಾಗೂ ವಿಠಲ ಸೇರಿದಂತೆ ಹಲವು ಗ್ರಾಮಗಳು ಸೇರ್ಪಡೆಯಾಗಿವೆ ಎಂದು ತಿಳಿಸಿದ್ದಾರೆ.
ಕರಡು ಅಧಿಸೂಚನೆ ಇನ್ನೂ ಅಂತಿಮವಾಗಿಲ್ಲ. ಅಧಿಸೂಚನೆ ಪ್ರಕಟವಾದ ದಿನಾಂಕದಿಂದ 60 ದಿನಗಳೊಳಗೆ ಸಾರ್ವಜನಿಕರು, ರೈತರು, ಗ್ರಾಮ ಪಂಚಾಯಿತಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳು ತಮ್ಮ ಆಕ್ಷೇಪಣೆಗಳು, ತಿದ್ದುಪಡಿ ಸಲಹೆಗಳು ಹಾಗೂ ಹೆಚ್ಚುವರಿ ಮಾಹಿತಿಯನ್ನು ಲಿಖಿತ ರೂಪದಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಸಲ್ಲಿಸಬಹುದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಆಸಕ್ತರು ತಮ್ಮ ಆಕ್ಷೇಪಣೆಗಳನ್ನು ಸಚಿವಾಲಯದ ಕಾರ್ಯದರ್ಶಿಗೆ ಅಥವಾ esz-mef@nic.in ಇ-ಮೇಲ್ ಮೂಲಕ ಕಳುಹಿಸಿ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳುವಂತೆ ರತನ್ ಗೌಡ ಅರಗಿ ಮನವಿ ಮಾಡಿದ್ದಾರೆ.
ಮಲೆನಾಡಿಗೆ ಆತಂಕ ತಂದ ಕೇಂದ್ರ ಸರ್ಕಾರ: ಇಎಸ್‌ಎ ಕರಡು ಅಧಿಸೂಚನೆ ವಿರೋಧಿಸಿ ಹೋರಾಟದ ಎಚ್ಚರಿಕೆ













