ಪ್ರತಿಭಟನಾ ನಿರತ ರೈತರ ಮೇಲೆ ಪೊಲೀಸ್ ಲಾಠಿ ಚಾರ್ಜ್, ನಾಳೆ ಶೃಂಗೇರಿ ಕ್ಷೇತ್ರ ಬಂದ್ ಗೆ ಕರೆ

ಕಡಬಗೆರೆ: (ನ್ಯೂಸ್ ಮಲ್ನಾಡ್ ವರದಿ) ಕಾಡಾನೆ ದಾಳಿಯಿಂದ ಇಂದು ಮಹಿಳೆಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಮಹಿಳೆಯ ಮೃತದೇಹವಿಟ್ಟು ಪ್ರತಿಭಟನೆ ನಡೆಸಿದರು. ಈ ವೇಳೆ ಪರಿಸ್ಥಿತಿ ಉದ್ವಿಗ್ನಗೊಂಡು ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ ಘಟನೆ ನಡೆದಿದೆ.

ಹೌದು, ಪ್ರತಿಭಟನೆ ವೇಳೆ ರೈತರು ಹಾಗೂ ಕಾರ್ಮಿಕರ ಮೇಲೆ ಲಾಠಿ ಚಾರ್ಜ್ ನಡೆಸಿ ಪ್ರತಿಭಟನಾಕರಾರದ ಅಭಿಷೇಕ್ ಹೊಸಳ್ಳಿ, ರಂಜಿತ್ ಶೃಂಗೇರಿ, ನಾಮಾ ನಾಗೇಶ್, ಪುರುಷೋತ್ತಮ್ ಕೂಸ್ಕಲ್, ಸಚಿನ್ ಮುಡುಬಾಗಿಲು , ಧನಂಜಯ ವರ್ಕಟ್ಟೆ , ಕಾರ್ತಿಕ್ ಅಲೆಹಳ್ಳಿ, ವಿನೋದ್ ಬೊಗಸೆ, ಅರೇನೂರು ಸಂತೋಷ್, ಮಂಜುನಾಥ್ ಕುಂಬಾಸಾಲೂರು, ಸಾರ್ಥಕ ಕುಂಬಾಸಾಲೂರು, ಮಾಜಿ ಸಚಿವ ಡಿ.ಎನ್ ಜೀವರಾಜ್, ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ್ ಶೆಟ್ಟಿ, ಶೃಂಗೇರಿ ರೈತ ಒಕ್ಕೂಟದ ವಿಶ್ವನಾಥ್ ಗದ್ದೆಮನೆ ‌ಹಾಗೂ ಅರುಣ್ ಕುಮಾರ್ ಸೇರಿದಂತೆ ಹಲವು ಮುಖಂಡರನ್ನು ಬಂಧಿಸಲಾಗಿದೆ. ಈ ಹಿನ್ನಲೆಯಲ್ಲಿ ನಾಳೆ ಶೃಂಗೇರಿ ಕ್ಷೇತ್ರದಲ್ಲಿ ಸ್ವಯಂಪ್ರೇರಿತ ಬಂದ್‌ಗೆ ಕರೆ ನೀಡಲಾಗಿದೆ.

ಇಂದು ರೈತರ ಮೇಲೆ ನಡೆದಿರುವ ಲಾಠಿ ಚಾರ್ಜ್ ವಿರುದ್ಧ ನಾಳೆ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಕರೆ ಕೊಟ್ಟಿರುವ ಬಂದ್ ಗೆ ಬಿಜೆಪಿ ಪಕ್ಷದಿಂದ ಸಂಪೂರ್ಣ ಬೆಂಬಲ ಇದೆ. ಈ ರೀತಿ ರೈತರ ಮೇಲೆ ನಡೆದಿರುವ ಲಾಠಿ ಚಾರ್ಚ್ ಖಂಡನಾರ್ಹ. ಕೆಲವರಿಗೆ ತಲೆ, ಕಿವಿ ರಕ್ತ ಬರುವಂತೆ ಲಾಠಿ ಚಾರ್ಜ್ ಮಾಡಿದ್ದಾರೆ. ಇದನ್ನು ನಾವು ಸಹಿಸುವುದಿಲ್ಲ. ಹೀಗಾಗಿ ಶೃಂಗೇರಿ ಕ್ಷೇತ್ರ ಬಂದ್‌ಗೆ ಬಿಜೆಪಿ ಸಂಪೂರ್ಣ ಬೆಂಬಲ ನೀಡುತ್ತದೆ. ಅಲ್ಲದೆ, ನಾಳೆ ನಡೆಯಲಿರುವ ಪ್ರತಿಭಟನೆಯಲ್ಲಿ ನಾವೆಲ್ಲರೂ ಭಾಗವಹಿಸಲಿದ್ದಾರೆ – ಡಿ. ಎನ್. ಜೀವರಾಜ್, ಮಾಜಿ ಸಚಿವರು

ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ವತಿಯಿಂದ ಈ ಬಗ್ಗೆ ಪ್ರಕಟಣೆ ನೀಡಿದ್ದು, ರಾಜ್ಯ ಸರ್ಕಾರದ ಕ್ರಮವನ್ನು ತೀವ್ರವಾಗಿ ವಿರೋಧಿಸಿದೆ. ಆನೆ ದಾಳಿಯಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಮಲೆನಾಡಿನ ಜನರ ಭದ್ರತೆಗಾಗಿ ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕು. ಇದಲ್ಲದೆ, ನ್ಯಾಯಕ್ಕಾಗಿ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ರೈತರು ಮತ್ತು ಕಾರ್ಮಿಕರ ಮೇಲೆ ಲಾಠಿ ಚಾರ್ಜ್ ಮಾಡಿರುವುದನ್ನು ಸಮಿತಿ ಖಂಡಿಸಿದ್ದು, ಬಂಧಿತರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದೆ.

ನಾಳೆ ಶೃಂಗೇರಿ ಕ್ಷೇತ್ರ ಬಂದ್ ಗೆ ಕರೆ

ನಾಳೆ (ಫೆಬ್ರವರಿ 23ರಂದು) ನಡೆಯಲಿರುವ ಬಂದ್‌ಗೆ ಶೃಂಗೇರಿ ರೈತ ಒಕ್ಕೂಟ ಹಾಗೂ ಜೆಡಿಎಸ್ ಪಕ್ಷದಿಂದ ಸಂಪೂರ್ಣ ಬೆಂಬಲ ಸೂಚಿಸಲಾಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ರಾಷ್ಟ್ರೀಯ ವಕ್ತಾರ ಸುಧಾಕರ್ ಶೆಟ್ಟಿ ನ್ಯೂಸ್ ಮಲ್ನಾಡ್ ಗೆ ಹೇಳಿಕೆ ನೀಡಿದ್ದಾರೆ. ಹಾಗೆಯೇ ಶೃಂಗೇರಿ ಕ್ಷೇತ್ರದ ಎಲ್ಲಾ ರೈತರು, ನಾಗರಿಕರು ಹಾಗೂ ವರ್ತಕರು ಸಹಕಾರ ನೀಡಬೇಕು ಎಂದು ಸಮಿತಿ ಮನವಿ ಮಾಡಿದೆ.

ಆನೆ ದಾಳಿಯಿಂದ ಒಳಗಾದ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಅವರ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಬೇಕು ಎಂದು ನಾವು ಪ್ರತಿಭಟನೆ ಮಾಡಿದ್ದೇವೆ. ಆದರೆ ಶೃಂಗೇರಿ ಕ್ಷೇತ್ರದ ಶಾಸಕರು ನಮಗೆ ನ್ಯಾಯ ಕೇಳಿದ್ದಕ್ಕೆ ಲಾಠಿ ಚಾರ್ಜ್ ಮಾಡಿಸಿ ನಮ್ಮನ್ಮು ಬಂಧಿಸಿದ್ದಾರೆ. ಇದು ರೈತರ ಮೇಲೆ ನಡೆದ ಅತಿ ದೊಡ್ಡ ಅನ್ಯಾಯ. ನಾಳಿನ ಬಂದ್ ಗೆ ಜೆಡಿಎಸ್ ಪಕ್ಷದಿಂದ ಸಂಪೂರ್ಣ ಬೆಂಬಲವಿದೆ. – ಸುಧಾಕರ್ ಶೆಟ್ಟಿ, ಜೆಡಿಎಸ್ ರಾಷ್ಟ್ರೀಯ ವಕ್ತಾರರು.

ಪ್ರತಿಭಟನಾಕಾರರ ಬೇಡಿಕೆಗೆ ಒಪ್ಪದ ಶಾಸಕರು, ಜಿಲ್ಲಾಡಳಿತ:

ಮೃತ ಮಹಿಳೆಯ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡಬೇಕು, ಕಾಡಾನೆ ಹಾವಳಿಗೆ ತಡೆಗಟ್ಟುವಂತೆ ಆನೆ ಬೇಲಿ (ಎಲೆಕ್ಟ್ರಿಕ್ ಫೆನ್ಸಿಂಗ್) ವ್ಯವಸ್ಥೆ ಮಾಡಿ ಶಾಶ್ವತ ಪರಿಹಾರ ಕಲ್ಪಿಸಬೇಕು ಹಾಗೂ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಆದರೆ ₹20 ಲಕ್ಷಕ್ಕಿಂತ ಹೆಚ್ಚಿನ ಪರಿಹಾರ ನೀಡಲು ಶಾಸಕರು ಮತ್ತು ಜಿಲ್ಲಾಡಳಿತ ಸಮ್ಮತಿಸಿಲ್ಲವೆಂದು ಆರೋಪಿಸಲಾಗಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.