ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ನೆಮ್ಮಾರು ಇಲ್ಲಿನ 2026-27ನೇ ಶೈಕ್ಷಣಿಕ ಸಾಲಿನ 8, 9 ಹಾಗೂ 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಅಗತ್ಯವಿರುವ ನೋಟ್ ಬುಕ್‌ಗಳನ್ನು ವಿವಿಧ ದಾನಿಗಳ ಸಹಾಯದಿಂದ ಉಚಿತವಾಗಿ ವಿತರಿಸಲಾಯಿತು.
ಸುಮಾರು ₹80 ಸಾವಿರ ಮೌಲ್ಯದ ನೋಟ್ ಬುಕ್‌ಗಳ ವಿತರಣೆಗೆ ಧನಸಹಾಯ ನೀಡಿದ ಶ್ರೀಮತಿ ಸರೋಜ (ಬೆಂಗಳೂರು, ನಿವೃತ್ತ ಪ್ರಾಂಶುಪಾಲರು), ಶ್ರೀ ರಾಜೇಂದ್ರ ಭಟ್ ತೋರಣಗದ್ದೆ, ಶ್ರೀಮತಿ ಸುಧಾ ಸುಬ್ರಹ್ಮಣ್ಯ ಬಸರೀಕಟ್ಟೆ, ಶ್ರೀ ಶಶಿಧರ್ (ಬೆಂಗಳೂರು), ಶ್ರೀ ರಾಜೇಶ್ ನೆಮ್ಮಾರು, ರಾಮೇಶ್ವರ ಹಾರ್ಡ್‌ವೇರ್ ಮಾಲೀಕರು ಹಾಗೂ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ನೆಮ್ಮಾರು ಶಾಖೆಯ ವ್ಯವಸ್ಥಾಪಕರಾದ ಶ್ರೀ ಗಿರಿಧರ ಕೃಷ್ಣರಾಜ ಆಚಾರ್ಯ ಅವರಿಗೆ ಕನ್ನಡ ಭಾಷಾ ಶಿಕ್ಷಕರಾದ ಶ್ರೀ ಸುಬ್ರಹ್ಮಣ್ಯ ಭಟ್ ವಿಶೇಷ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಪುಟ್ಟಪ್ಪ ಹೆಗ್ಡೆ ಅವರು, ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಜೊತೆಗೆ ದಾನಿಗಳು ನೀಡುವ ವಿಶೇಷ ಸಹಕಾರವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಶಂಕ್ರಪ್ಪ ವಹಿಸಿದ್ದರು. ಈ ಸಂದರ್ಭದಲ್ಲಿ ನೋಟ್ ಬುಕ್ ವಿತರಣೆಗೆ ಸಹಕರಿಸಿದ ಎಲ್ಲ ದಾನಿಗಳಿಗೆ ಅವರು ಧನ್ಯವಾದ ಅರ್ಪಿಸಿದರು.
ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀನಾಥ್, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿಜ್ಞಾನ ಶಿಕ್ಷಕಿ ಶ್ರೀಮತಿ ಶಾಹಿನ್ ತಾಜ್ ಸ್ವಾಗತಿಸಿದರು. ಆಂಗ್ಲ ಭಾಷಾ ಶಿಕ್ಷಕಿ ಶ್ರೀಮತಿ ಸರೋಜದೇವಿ ವಂದನಾರ್ಪಣೆ ಸಲ್ಲಿಸಿದರು. ಶ್ರೀ ಮಂಜಯ್ಯ ಕಾರ್ಯಕ್ರಮವನ್ನು ನಿರೂಪಿಸಿದರು.













