ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಕಾರ್ ಗೆ ಹಿಂದೆಯಿಂದ ಬೈಕ್ ಗುದ್ದಿದ ಪರಿಣಾಮ ವಿದ್ಯಾರ್ಥಿನಿಯೊಬ್ಬಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಕಿಗ್ಗಾ ಸಮೀಪದ ಗಂಡಘಟ್ಟ ಬಳಿ ನಡೆದಿದೆ.
ತಾಲ್ಲೂಕಿನ ಮರ್ಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಣಪತಿಕಟ್ಟೆ ಸಮೀಪ ಈ ಘಟನೆ ನಡೆದಿದ್ದು, ಶೃಂಗೇರಿ ಕಡೆ ಬರುತ್ತಿದ್ದ ಕಾರ್ ಗೆ ಹಿಂದೆಯಿಂದ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಬೈಕ್ ಸವಾರ ದಿಢೀರ್ ಬ್ರೇಕ್ ಹೊಡೆದ, ಪರಿಣಾಮ ಹಿಂಬದಿ ಕುಳಿತಿದ್ದ ವಿದ್ಯಾರ್ಥಿನಿ ರಸ್ತೆಗೆ ಬಿದ್ದಿದ್ದಾಳೆ. ಈ ವೇಳೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾಳೆ. ಮೃತ ವಿದ್ಯಾರ್ಥಿನಿಯನ್ನು ಕಿತ್ತಲುಮನೆಕುಡಿಗೆ ನಿವಾಸಿ ರಕ್ಷಿತಾ (17) ಎಂದು ಗುರುತಿಸಲಾಗಿದ್ದು, ರಕ್ಷಿತಾ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಇಂದು ಆಕೆಯನ್ನು ಹಾಸ್ಟೆಲ್ ಗೆ ಬಿಡುವ ನಿಮಿತ್ತ ಆಕೆಯ ಸಹೋದರ ಬೈಕ್ ನಲ್ಲಿ ಕರೆದೊಯ್ಯುವ ವೇಳೆ ಈ ದುರ್ಘಟನೆ ಸಂಭವಿಸಿದೆ.

ಈ ಕುರಿತು ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.












