ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಇಲ್ಲಿನ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೃದ್ಧೆಯೊಬ್ಬರ ಚಿನ್ನದ ಸರ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಗೋಪಾಲಗೌಡ ಬಡಾವಣೆಯ ಚಾಲುಕ್ಯ ನಗರದ ನಿವಾಸಿ ಭರತ್ (21) ಹಾಗೂ ಮೇಲಿನ ತುಂಗಾ ನಗರದ ನಿವಾಸಿ ಮೊಹಮ್ಮದ್ ಅಬೀದ್ (19) ಬಂಧಿತರು. ಆರೋಪಿಗಳಿಂದ ಒಟ್ಟು ₹1,40,000 ಮೌಲ್ಯದ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.

ವಿನೋಬನಗರ ಠಾಣೆ ವ್ಯಾಪ್ತಿಯ ಸೂರ್ಯ ಬಡಾವಣೆಯ ನಿವಾಸಿಯಾದ 73 ವರ್ಷದ ವೃದ್ಧೆಯೊಬ್ಬರು ಮೇ 13ರಂದು ಬೆಳಿಗ್ಗೆ ವಾಕಿಂಗ್ ಹೊರಟಿದ್ದರು. ಈ ವೇಳೆ ಬೈಕ್ನಲ್ಲಿ ಬಂದಿದ್ದ ಕಳ್ಳರಿಬ್ಬರು ವೃದ್ಧೆಯ ಕೊರಳಿನಲ್ಲಿದ್ದ ಮಾಂಗಲ್ಯ ಸರವನ್ನು ಬಲವಂತವಾಗಿ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಪೊಲೀಸ್ ಇನ್ಸ್ಪೆಕ್ಟರ್ ಡಿ.ಕೆ.ಸಂತೋಷ್ಕುಮಾರ್ ಹಾಗೂ ಪಿಎಸ್ಐ ಜಿ.ತಿರುಮಲೇಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದೆ.

















