ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮೂರು ಪ್ರತ್ಯೇಕ ಎಲೆಕ್ಟ್ರಿಕ್ ಮೋಟಾರ್ ಸ್ಟಾರ್ಟರ್ ಹಾಗೂ ಕೇಬಲ್ ಕಳ್ಳತನ ಪ್ರಕರಣಗಳನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಸರಣಿ ಕಳ್ಳತನ ಪ್ರಕರಣಗಳನ್ನು ಶೀಘ್ರವಾಗಿ ಪತ್ತೆಹಚ್ಚುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ ದಯ್ಮಾ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಕುಮಾರ ಸಿ.ಟಿ. ಹಾಗೂ ಚಿಕ್ಕಮಗಳೂರು ಉಪವಿಭಾಗದ ಡಿವೈಎಸ್‌ಪಿ ನಾಗರಾಜ್ ಅವರ ಮೇಲ್ವಿಚಾರಣೆಯಲ್ಲಿ ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕ ಶ್ರೀಶೈಲಕುಮಾರ್ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಯಿತು. ಪೊಲೀಸ್ ಉಪನಿರೀಕ್ಷಕಿ ನೇತ್ರಾವತಿ ಹಾಗೂ ಸಿಬ್ಬಂದಿಗಳಾದ ಲೋಹಿತ್, ರಮೇಶ್, ಲಕ್ಷ್ಮಣ, ಕಿರಣ ಮತ್ತು ಶಿವರಾಜ್ ಒಳಗೊಂಡ ತಂಡವು ವಿವಿಧ ಆಯಾಮಗಳಲ್ಲಿ ವೈಜ್ಞಾನಿಕ ತನಿಖೆ ನಡೆಸಿ ಪ್ರಕರಣವನ್ನು ಭೇದಿಸಿದೆ.

ಪ್ರಕರಣಗಳಲ್ಲಿ ಬೆಳವಾಡಿ, ಪಾಯಗೊಂಡನಹಳ್ಳಿ ಮತ್ತು ನಾಗರಹಳ್ಳಿ ಗ್ರಾಮಗಳಲ್ಲಿ ಕಳ್ಳತನವಾಗಿದ್ದ ಸುಮಾರು 120 ಮೀಟರ್ ಉದ್ದದ ಕೇಬಲ್ ವೈರ್ ಹಾಗೂ ಮೋಟಾರ್ ಸ್ಟಾರ್ಟರ್ ಬಾಕ್ಸ್ ಅನ್ನು ವಶಕ್ಕೆ ಪಡೆಯಲಾಗಿದೆ. ಕದ್ದ ವಸ್ತುಗಳ ಒಟ್ಟು ಮೌಲ್ಯ ಸುಮಾರು 30 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಇದಲ್ಲದೆ ಕಳ್ಳತನಕ್ಕೆ ಬಳಸಲಾಗಿದ್ದ ಸುಮಾರು 1.15 ಲಕ್ಷ ರೂ. ಮೌಲ್ಯದ ಮೂರು ಬೈಕ್‌ಗಳನ್ನೂ ಪೊಲೀಸರು ಜಪ್ತಿ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನವೀನ್ ಕುಮಾರ್ (34), ಸುನೀಲ್ (32), ಮತ್ತೊಬ್ಬ ಸುನೀಲ್ (33) ಹಾಗೂ ಅನಿಲ್ (28) ಎಂಬ ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.












