ಸೊರಬ: (ನ್ಯೂಸ್ ಮಲ್ನಾಡ್ ವರದಿ) ತಾಲ್ಲೂಕಿನ ಚಂದ್ರಗುತ್ತಿ ಹೋಬಳಿಯ ಬಸ್ತಿಕೊಪ್ಪದ ಗಣಪತಿನಾಯ್ಕ ಆ್ಯಂಡ್ ಕಂಪನಿಗೆ ಸೇರಿದ್ದ ಕಲ್ಲು ಗಣಿಗಾರಿಕೆಯ ಸ್ಥಳದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಜಿಲೆಟಿನ್ ಕಡ್ಡಿ ಹಾಗೂ ಅಮೋನಿಯಂ ನೈಟ್ರೇಟ್ ಅನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸ್ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ತಂಡ ತಪಾಸಣೆ ನಡೆಸಿ 100ಕ್ಕೂ ಹೆಚ್ಚು ಜಿಲೆಟಿನ್ ಕಡ್ಡಿ ಹಾಗೂ ಅಮೋನಿಯಂ ನೈಟ್ರೇಟ್ ವಶಪಡಿಸಿಕೊಂಡಿದೆ.

ಮೂರು ಹಂತಗಳಲ್ಲಿ ಜಿಲೆಟಿನ್ ಹಾಗೂ ಅಮೋನಿಯಂ ನೈಟ್ರೇಟ್ ಸ್ಫೋಟಿಸಿರುವ ಬಾಂಬ್ ನಿಷ್ಕ್ರಿಯ ದಳ ಇನ್ನುಳಿದ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಿದೆ. ಸ್ಫೋಟಕ ಪತ್ತೆಯಾದ ಕಾರಣ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.


ಈ ಕುರಿತು ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
















