ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಸಿಗದಾಳ್ ಘಾಟಿಯ ಚೌಕಿ ಬಸ್ ನಿಲ್ದಾಣದ ಸಮೀಪ ನಡೆದಿದೆ. ಗಾಯಗೊಂಡ ಯುವಕನನ್ನು ನಿಲುವಾಗಿಲು ಗ್ರಾಮದ ಸೂರಜ್ ಆರ್. ನಾಯಕ್ (26) ಎಂದು ಗುರುತಿಸಲಾಗಿದೆ.
ಸಿಗದಾಳ್ ಘಾಟಿಯ ಚೌಕಿ ಬಸ್ ನಿಲ್ದಾಣದ ಬಳಿ ಹರಿಹರಪುರ ಕಡೆಯಿಂದ ಬಂದ ಮಾರುತಿ 800 ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ತೀವ್ರತೆಗೆ ಸೂರಜ್ ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು, ಅವರ ಬಲಗಾಲಿನ ತೊಡೆ ಹಾಗೂ ಮೊಣಕಾಲಿನ ಭಾಗಕ್ಕೆ ಗಂಭೀರ ಗಾಯಗಳಾಗಿವೆ.

ಗಾಯಾಳುವನ್ನು ತಕ್ಷಣ ಪೋಷಕರು ಹಾಗೂ ಸಾರ್ವಜನಿಕರ ಸಹಾಯದಿಂದ ಕೊಪ್ಪದ ಹರ್ಷಲಕ್ಷ್ಮಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ದಾಖಲಿಸಲಾಗಿದೆ.


ಈ ಸಂಬಂಧ ಸೂರಜ್ ಅವರ ತಂದೆ ನೀಡಿದ ದೂರಿನ ಆಧಾರದ ಮೇಲೆ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.













