ಮಲೆನಾಡಿನಲ್ಲಿ ಧಾರಾಕಾರ ಮಳೆ, ರಸ್ತೆಗಳು ಬಂದ್; ಹಲವೆಡೆ ಅವಾಂತರ ಸೃಷ್ಟಿ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಶೃಂಗೇರಿ ಪಟ್ಟಣದಲ್ಲಿ ತುಂಗಾ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಮಳೆಯಿಂದಾಗಿ ಶೃಂಗೇರಿ ನದಿ ದಡದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಪಟ್ಟಣದ ಗಾಂಧಿ ಮೈದಾನದ ಪ್ಯಾರಲಲ್ ರಸ್ತೆಗೆ ತುಂಗಾ ನದಿ ನೀರು ನುಗ್ಗಿದೆ. ಅಲ್ಲದೇ ಕ್ಷಣ-ಕ್ಷಣಕ್ಕೂ ತುಂಗಾ ನದಿ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ.

ಕುರುಬಗೇರಿ ರಸ್ತೆ ಮೇಲೆ ನುಗ್ಗಿದ ನೀರು, ಸಂಚಾರ ಬಂದ್

ಸತತವಾಗಿ ಮಳೆ ಸುರಿಯುತ್ತಿರುವುದರಿಂದ ತುಂಗಾ ನದಿಯು ತುಂಬಿ ಹರಿಯುತ್ತಿದ್ದು, ಕುರುಬಗೇರಿ ರಸ್ತೆಯಿಂದ ಶ್ರೀಮಠದ ಸಮೀಪದ ಗಾಂಧಿ ಮೈದಾನದವರೆಗೆ ತೆರಳುವ ರಸ್ತೆಯನ್ನು ಬಂದ್ ಮಾಡಲಾಗಿದೆ. ಎರಡು ಕಡೆ ಸಹ ಬ್ಯಾರಿಕೇಡ್ ಆಳವಡಿಸಲಾಗಿದ್ದು, ಗಾಂಧಿ ಮೈದಾನದ ಪಾರ್ಕಿಂಗ್ ನಲ್ಲಿರುವ ಎಲ್ಲಾ ಪ್ರವಾಸಿ ವಾಹನಗಳನ್ನು ತೆರವುಗೊಳಿಸಲಾಗಿದೆ. ಅಲ್ಲದೆ ಮಳೆ ಹೆಚ್ಚಾಗುತ್ತಿರುವುದರಿಂದ ಗಾಂಧಿ ಮೈದಾನದಲ್ಲಿರುವ ಎಲ್ಲಾ ಅಂಗಡಿ ಮಳಿಗೆಗಳನ್ನು ತಾತ್ಕಾಲಿಕವಾಗಿ ತೆರವು ಮಾಡಲಾಗಿದೆ.

ಕರುಬಗೇರಿ ರಸ್ತೆಗೆ ನೀರು ನುಗ್ಗಿದ ಪರಿಣಾಮ ಪೊಲೀಸರು ಬ್ಯಾರಿಕೇಡ್ ಅಳವಡಿಸಿರುವುದು.

ಕಪ್ಪೆ ಶಂಕರ ಮುಳುಗಡೆ, ಪ್ರವಾಸಿಗರಿಗೆ ಎಚ್ಚರಿಕೆ

ಕಳೆದ ಎರಡು ದಿನದಿಂದ ಶೃಂಗೇರಿ, ಕೊಪ್ಪ, ಜಯಪುರ ಸುತ್ತಮುತ್ತ ಭೀಕರ ಮಳೆಯಾಗುತ್ತಿದ್ದು, ಶೃಂಗೇರಿಯ ಮಠದಲ್ಲಿನ ಕಪ್ಪೆ ಶಂಕರ ಮುಳುಗಡೆಯಾಗಿದೆ. ಇಲ್ಲಿಗೆ ಆಗಮಿಸುವ ಭಕ್ತರಿಗೆ ಎಚ್ಚರಿಕೆಯನ್ನು ನೀಡಲಾಗಿದೆ.

ಕಳಸದಲ್ಲಿ ಹೆಬ್ಬಾಳೆ ಸೇತುವೆ ಮುಳುಗಡೆ, ಸಂಪರ್ಕ ಬಂದ್

ಹೆಬ್ಬಾಳೆ ಸೇತುವೆಗೆ ಭದ್ರಾ ನೀರು ಅಪ್ಪಳಿಸುತ್ತಿದ್ದು, ಸೇತುವೆ ಮುಳುಗಡೆಯಾಗಿದೆ. ಪರಿಣಾಮ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದ್ದು, ಹೊರನಾಡಿಗೆ ಭೇಟಿ ನೀಡುವ ಪ್ರವಾಸಿಗರಿಗೂ ತೊಂದರೆಯಾಗಿದೆ. ಈಗಾಗಲೇ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದು, ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಹೆಬ್ಬಾಳೆಯಲ್ಲಿ ನಿರ್ಮಿಸಿರುವ ಸೇತುವೆ ಮುಳುಗು ಸೇತುವೆ ಎಂದೇ ಖ್ಯಾತಿ ಪಡೆದಿದೆ. ಪ್ರತಿ ವರ್ಷ ಮಳೆಗಾಲದಲ್ಲಿಯೂ ಸೇತುವೆ ಮುಳುಗಡೆಯಾಗುತ್ತದೆ.

ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕಳಸದ ಹೆಬ್ಬಾಳೆ ಸೇತುವೆ

ಜಿಲ್ಲಾಡಳಿತದಿಂದ ರಜೆ ಘೋಷಣೆ

ಮುಂದಿನ ಮೂರು ದಿನಗಳ ಕಾಲ ಅಂದರೆ ಜುಲೈ 17ರವೆಗೆ ಭಾರೀ ಮಳೆ ಮುಂದುವರೆಯುವ ಹಿನ್ನೆಲೆ ನಾಳೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ, ಎನ್ ಆರ್ ಪುರ, ಮೂಡಿಗೆರೆ, ಕಳಸ ಹಾಗೂ ಚಿಕ್ಕಮಗಳೂರು ಸೇರಿದಂತೆ ಒಟ್ಟು ಆರು ತಾಲ್ಲೂಕಿನ ಎಲ್ಲಾ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಡ ಶಾಲೆಗಳಿಗೆ ನಾಳೆ (ಜುಲೈ 16) ರಜೆ ಘೋಷಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಜುಲೈ 17ಕ್ಕೆ ಮೊಹರಮ್ ನಿಮಿತ್ತ ಸರ್ಕಾರಿ ರಜೆ ಇರುವುದರಿಂದ ಒಟ್ಟು ಎರಡು ದಿನ ಮಕ್ಕಳಿಗೆ ರಜೆ ಸಿಗಲಿವೆ.

ಮಳೆ ಹಿನ್ನಲೆ ಮಲೆನಾಡು ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಕರ್ನಾಟಕದಲ್ಲಿ ಕಳೆದ 15ದಿನಗಳಿಂದ ಮಳೆಯ ಪ್ರಮಾಣ ಹೆಚ್ಚಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು ರೆಡ್ ಅಲರ್ಟ್​ ಘೋಷಿಸಲಾಗಿದೆ.

ಮಲೆನಾಡಿನಲ್ಲಿ ಭೀಕರ ಮಳೆ ಸುರಿಯುತ್ತಿವೆ.. ಹಲವೆಡೆ ಅಪಘಾತಗಳು ನಡೆಯುತ್ತಿವೆ.. ರಸ್ತೆಗಳಿಗೆ ನೀರು ನುಗ್ಗಿವೆ.. ಸೇತುವೆಗಳು ಮುಳುಗಿವೆ.. ಸಾಹಸ ಬೇಡ.. ದಯವಿಟ್ಟು ಎಚ್ಚರದಿಂದಿರಿ! ಇದು ನ್ಯೂಸ್ ಮಲ್ನಾಡ್ ಕಳಕಳಿ!

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.