ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡಿನಲ್ಲಿ ಜುಲೈ ಅಂತ್ಯದ ವೇಳೆಗೆ ಮುಂಗಾರು ಮಳೆ ಮತ್ತಷ್ಟು ತೀವ್ರಗೊಂಡಿದ್ದು, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದೆ. ಪರಿಣಾಮವಾಗಿ ತುಂಗಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಶೃಂಗೇರಿಯ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
ಶೃಂಗೇರಿ ಶಾರದಾ ಪೀಠಕ್ಕೆ ಸಂಪರ್ಕ ಕಲ್ಪಿಸುವ ಪರ್ಯಾಯ ರಸ್ತೆ (ಶೃಂಗೇರಿ ಮಠಕ್ಕೆ ಹೋಗುವ ಪ್ಯಾರಲ್ ರಸ್ತೆ ) ನೆರೆಯಿಂದ ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಪೊಲೀಸರು ಹಾಗೂ ಸ್ಥಳೀಯ ಆಡಳಿತವು ಅಪಾಯದ ಪ್ರದೇಶಗಳಿಗೆ ಸಾರ್ವಜನಿಕರು ತೆರಳದಂತೆ ಎಚ್ಚರಿಕೆ ನೀಡಿದ್ದು, ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

ಕಪ್ಪೆ ಶಂಕರ ಮುಳುಗಡೆ:
ತುಂಗಾ ನದಿಯ ನೀರಿನ ಮಟ್ಟ ಏರಿಕೆಯಿಂದ ಶೃಂಗೇರಿಯ ಕಪ್ಪೆ ಶಂಕರ ಪ್ರದೇಶವೂ ಮುಳುಗಡೆಯಾಗಿದ್ದು, ನದಿತೀರದಲ್ಲಿ ಜನರು ಸೇರುವುದನ್ನು ನಿರ್ಬಂಧಿಸಲಾಗಿದೆ. ನದಿಯ ಪ್ರವಾಹ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತಗ್ಗು ಪ್ರದೇಶದ ನಿವಾಸಿಗಳು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

ಪಟ್ಟಣದಲ್ಲಿ ಟ್ರಾಫಿಕ್ ಜಾಮ್ :
ವಾರಾಂತ್ಯ (ವೀಕೆಂಡ್) ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಶೃಂಗೇರಿಗೆ ಆಗಮಿಸಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿರುವುದರಿಂದ ಪಟ್ಟಣದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ದೇವಸ್ಥಾನ ಹಾಗೂ ಪ್ರವಾಸಿ ತಾಣಗಳ ಸುತ್ತಮುತ್ತ ವಾಹನಗಳ ದಟ್ಟಣೆ ಹೆಚ್ಚಿದ್ದು, ಸಂಚಾರ ಪೊಲೀಸರು ವಾಹನಗಳ ಸುಗಮ ಸಂಚಾರಕ್ಕೆ ಕ್ರಮ ಕೈಗೊಂಡಿದ್ದಾರೆ.
ರಾಜ್ಯದಲ್ಲೇ ಅತಿ ಹೆಚ್ಚು ಮಳೆಯಾದ ಗ್ರಾಮ:
ಕಳೆದ 24 ಗಂಟೆಗಳಲ್ಲಿ ಶೃಂಗೇರಿ ತಾಲೂಕಿನ ಬೇಗಾರು ಗ್ರಾಮದಲ್ಲಿ 269 ಮಿ.ಮೀ. ಮಳೆಯಾಗಿದ್ದು, ಇದು ರಾಜ್ಯದಲ್ಲೇ ಅತಿ ಹೆಚ್ಚು ಮಳೆಯಾಗಿ ದಾಖಲಾಗಿದೆ. ನಿರಂತರ ಮಳೆಯ ಪರಿಣಾಮ ನದಿಗಳು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಹಲವು ಗ್ರಾಮೀಣ ರಸ್ತೆಗಳಲ್ಲಿ ನೀರು ನಿಂತಿರುವ ವರದಿಯಾಗಿದೆ.
24 ರಿಂದ 48 ಗಂಟೆಗಳವರೆಗೆ ಭಾರೀ ಮಳೆಯ ಸಾಧ್ಯತೆ:
ಹವಾಮಾನ ಇಲಾಖೆ ಮಲೆನಾಡು ಭಾಗಗಳಲ್ಲಿ ಮುಂದಿನ 24 ರಿಂದ 48 ಗಂಟೆಗಳವರೆಗೆ ಭಾರೀ ಮಳೆಯ ಸಾಧ್ಯತೆ ಇರುವುದಾಗಿ ಮುನ್ಸೂಚನೆ ನೀಡಿದೆ. ಅಗತ್ಯವಿಲ್ಲದಿದ್ದರೆ ಪ್ರವಾಸವನ್ನು ಮುಂದೂಡುವಂತೆ ಹಾಗೂ ನದಿತೀರ, ಜಲಪಾತ ಮತ್ತು ತಗ್ಗು ಪ್ರದೇಶಗಳಿಗೆ ತೆರಳದಂತೆ ಜಿಲ್ಲಾಡಳಿತ ಸಾರ್ವಜನಿಕರಿಗೆ ಮನವಿ ಮಾಡಿದೆ.













