ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಸ್ವಚ್ಛತೆ, ಗ್ರಾಪಂ ಕಾರ್ಯವೈಖರಿ, ನರೇಗಾ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಉತ್ತಮ ಸಾಧನೆ ಮಾಡಿರುವ ಜಿಲ್ಲೆಯ ಎಂಟು ಗ್ರಾಮ ಪಂಚಾಯಿತಿಗಳನ್ನು ಗುರುತಿಸಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಅ.2 ರಂದು ಬೆಂಗಳೂರಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆಯಾ ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒ ಭಾಗವಹಿಸಿ ಪುರಸ್ಕಾರ ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ; psi ನೇಮಕಾತಿ ಹಗರಣ; ಅಮೃತ್ ಪೌಲ್ಗೆ ಹೈಕೋರ್ಟ್ ನಿಂದ ಜಾಮೀನು

ಯಾವ್ಯಾವ ಗ್ರಾಪಂಗೆ ಗಾಂಧಿ ಗ್ರಾಮ ಪುರಸ್ಕಾರ:
* ಚಿಕ್ಕಮಗಳೂರು- ಮುಗುಳವಳ್ಳಿ
* ಕಳಸ- ಇಡಕಣಿ
* ಅಜ್ಜಂಪುರ- ಬುಕ್ಕಾಂಬುದು
* ಕಡೂರು- ಜೋಡಿತಿಮ್ಮಾಪುರ
* ಕೊಪ್ಪ- ಜಯಪುರ
* ಮೂಡಿಗೆರೆ- ಜಾವಳಿ
* ಎನ್.ಆರ್.ಪುರ- ನಾಗಲಾಪುರ
* ಶೃಂಗೇರಿ- ಕೂತಗೋಡು
* ತರೀಕೆರೆ- ಹಾದಿಕೆರೆ
ಇದನ್ನೂ ಓದಿ; ಗೂಗಲ್ಗೆ 25ರ ಸಂಭ್ರಮ; ಡೂಡಲ್ ಮೂಲಕ ಜನ್ಮದಿನ ಆಚರಿಸಿಕೊಂಡ ಸರ್ಚ್ ಎಂಜಿನ್
ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಹೇಗೆ:
ಗ್ರಾಪಂನ ಒಂದೊಂದು ವಿಭಾಗದಲ್ಲಿ ಮಾಡುವ ಕೆಲಸಕ್ಕೂ ರೇಟಿಂಗ್ ನಿಗದಿಪಡಿಸಲಾಗಿರುತ್ತದೆ. ಈ ರೇಟಿಂಗ್ ಅನ್ನು ಆಯಾ ಗ್ರಾಪಂ ಪಿಡಿಒಗಳೇ ನೀಡುತ್ತಾರೆ. ಇದನ್ನು ತಾಲೂಕು ಪಂಚಾಯಿತಿ ಇಒ ಪರಿಶೀಲಿಸುತ್ತಾರೆ. ಈ ಪ್ರಕ್ರಿಯೆ ಮುಗಿದ ಬಳಿಕ ಪಕ್ಕದ ತಾಲೂಕಿನ ಇಒಗಳು ಇನ್ನೊಂದು ತಾಲೂಕಿನ ಗ್ರಾಪಂಗಳಿಗೆ ಭೇಟಿ ನೀಡಿ ರೇಟಿಂಗ್ ಪರಾಮರ್ಶೆ ನಡೆಸುತ್ತಾರೆ. ಆ ತಾಲೂಕಿನ ಅತ್ಯುತ್ತಮ ಕೆಲಸ ಮಾಡಿದ ಗ್ರಾಮ ಪಂಚಾಯಿತಿಯನ್ನು ಗುರುತಿಸಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಶಿಫಾರಸು ಮಾಡಿ ಜಿಲ್ಲಾ ಪಂಚಾಯಿತಿಗೆ ಕಳುಹಿಸುತ್ತಾರೆ.
ಜಿಲ್ಲಾ ಪಂಚಾಯಿತಿ ಸಿಇಒ ಸಹ ಮತ್ತೊಮ್ಮೆ ರೇಟಿಂಗ್ ಪರಿಶೀಲಿಸಿ ಸರ್ಕಾರಕ್ಕೆ ಅಂತಿಮ ಪಟ್ಟಿ ಸಲ್ಲಿಸುತ್ತಾರೆ. ಜಿಲ್ಲೆಯ ಎಂಟು – ತಾಲೂಕುಗಳಲ್ಲಿಯೂ ಒಂದೊಂದು ಅತ್ಯುತ್ತಮ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿ ಗಾಂಧಿಗ್ರಾಮ ಪುರಸ್ಕಾರಕ್ಕೆ ಕಳುಹಿಸಲಾಗಿದೆ. ಈಗಾಗಲೇ ಅಂತಿಮಗೊಳಿಸಿರುವ ೮ ಗ್ರಾಮ ಪಂಚಾಯಿತಿಗಳಿಗೆ ಬೆಂಗಳೂರಿನಲ್ಲಿ ನಡೆಯುವ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪುರಸ್ಕಾರ ನೀಡಲಾಗುತ್ತದೆ ಎಂದು ಜಿಪಂ ಸಿಇಒ ಡಾ. ಗೋಪಾಲಕೃಷ್ಣ ಮಾಹಿತಿ ನೀಡಿದರು.
ಈ ಬಾರಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗ್ರಾಪಂಗಳನ್ನು ಕಟ್ಟುನಿಟ್ಟಾಗಿ ಆಯ್ಕೆ ಮಾಡಲಾಗಿದೆ. ಅಧಿಕಾರಿಗಳು ಯಾವ ಒತ್ತಡಕ್ಕೂ ಮಣಿಯದೆ ಯಾವ ಗ್ರಾಪಂಗಳು ಅತ್ಯುತ್ತಮ ಸಾಧನೆ ಮಾಡಿವೆಯೋ ಅವುಗಳಿಗೆ ಪುರಸ್ಕಾರ ನೀಡಲಾಗಿದೆ. ಈ ಮೂಲಕ ಇತರ ಗ್ರಾಪಂಗಳು ಮುಂದಿನ ದಿನಗಳಲ್ಲಿ ಉತ್ತಮ ಕಾರ್ಯ ಮಾಡಿ ಪುರಸ್ಕಾರ ಪಡೆಯಲು ಪ್ರೇರಣೆ ಸಿಕ್ಕಂತಾಗಿದೆ.
ಜಾವಳಿ ಗ್ರಾ.ಪಂ.ಗೆ ಪ್ರಥಮ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರದ ಗರಿ:
ಬಾಳೂರು ಹೋಬಳಿಯ ಜಾವಳಿ ಗ್ರಾ.ಪಂ.ಗೆ ಜನಸ್ನೇಹಿ ಆಡಳಿತ, ಸಮಗ್ರ ಗ್ರಾಮಾಭಿವೃದ್ದಿ, ನರೇಗಾ ಸಮರ್ಪಕ ಬಳಕೆಯಿಂದ ಜಾವಳಿ ಗ್ರಾ.ಪಂ.ಗೆ ಗಾಂಧಿ ಗ್ರಾಮದ ಪುರಸ್ಕಾರದ ಗರಿ ಲಭಿಸಿದೆ. ಜಾವಳಿ ಹೇಮಾವತಿ ನದಿಯ ಉಗಮಸ್ಥಾನ. ಹೆಮ್ಮೆಯ ಮಡಿಲಲ್ಲಿ ಈ ಗ್ರಾಮ ಶೋಭಿಸುತ್ತಿದೆ. ಸರ್ಕಾರದ ಅನುದಾನಗಳನ್ನು ಹಸಿರು ತಾಣದಲ್ಲಿ ಸಮರ್ಪಕವಾಗಿ ಬಳಸಿ ಸೌಲಭ್ಯದಿಂದ ಜನ ವಂಚಿತರಾಗಬಾರದೆಂಬ ಉತ್ತಮ ಉದ್ದೇಶದಿಂದ ಜಾವಳಿ ಗ್ರಾಮ ಬೆಳೆಯಲು ಸಹಕಾರಿಯಾಗಿದೆ.
ಕಳೆದ ವರ್ಷ ನೆರೆಯ ಗ್ರಾಮ ಸುಂಕಸಾಲೆ ಮೂರು ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪಡೆದಿತ್ತು. ಈ ಬಾರಿ ಜಾವಳಿ ಗ್ರಾಮ ಪಂಚಾಯಿತಿ ತಾವೇನು ಕಡಿಮೆ ಇಲ್ಲ ಎಂಬಂತೆ ಸಾಧನೆಯ ಮೆಟ್ಟಿಲೇರಿ ವಿವಿಧ ಯೋಜನೆ ಹಾಗೂ ಸೇವೆಗಳನ್ನು ನೀಡುವಲ್ಲಿ ಹಂತಹಂತವಾಗಿ ಏರಿ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮದ ಪುರಸ್ಕಾರದ ಕನಸು ನನಸು ಮಾಡಿದೆ.
ಅನುದಾನಗಳ ಸಮರ್ಪಕ ಬಳಕೆ, ನರೇಗಾದಿಂದ ಉತ್ತಮ ಕಾಮಗಾರಿಗಳು:
ಜಾವಳಿ ಗ್ರಾಮ ಪಂಚಾಯಿತಿ ಅನೇಕ ಮಾನದಂಡಗಳನ್ನು ಅನುಸರಿಸಿ ಗ್ರಾಮ ಪಂಚಾಯಿತಿ ಅಭಿವೃದ್ದಿಗೆ ಪಣತೊಟ್ಟಿತ್ತು. ಗ್ರಾಮ ಪಂಚಾಯಿತಿ ಸಮಗ್ರ ಅಭಿವೃದ್ದಿ ನಿರ್ವಹಿಸುವಲ್ಲಿ ಸಫಲವಾಗಿದೆ. ಅನುದಾನಗಳ ಸಮರ್ಪಕ ಬಳಕೆ, ನರೇಗಾದಿಂದ ಉತ್ತಮ ಕಾಮಗಾರಿಗಳು, ಬಂದ ಅನುದಾನಗಳ ಬಳಕೆ, 15ನೇ ಹಣಕಾಸು ಯೋಜನೆಯ ಸದ್ಬಳಕೆ, ಸ್ವಸಹಾಯ ಗುಂಪುಗಳ ಉತ್ತಮ ಕಾರ್ಯ ಚಟುವಟಿಕೆಗಳು, ಕುಡಿಯುವ ನೀರು, ಬೀದಿ ದೀಪಗಳ ನಿರ್ವಹಣೆ, ಮೆಸ್ಕಾಂ ಬಿಲ್ ಸಂಪೂರ್ಣ ಪಾವತಿ, ಸಕಾಲ ಸೇವೆಗಳ ಸಮರ್ಪಕ ಅನುಷ್ಠಾನ ತರುವಲ್ಲಿ ಯಶಸ್ವಿಯಾಗಿದೆ. ಉತ್ತಮ ಕಚೇರಿ ಕಟ್ಟಡ ಹಾಗೂ ನಗುಮುಖದ ಸಾರ್ವಜನಿಕ ಸೇವೆ ಜೊತೆಗೆ ಜನರ ಆರೋಗ್ಯ ಸುಧಾರಿಸುವ ಕಾರ್ಯಕ್ರಮಗಳು, ಅಂಗನವಾಡಿ ಹಾಗೂ ಶಾಲೆಗಳ ಅಭಿವೃದ್ದಿ ಕಾರ್ಯಕ್ರಮಗಳು, ಕಚೇರಿಯಲ್ಲಿ ಕಡತಗಳ ನಿರ್ವಹಣೆ ಜೊತೆಗೆ ಸಾಮಾಜಿಕ ಲೆಕ್ಕ ಪರಿಶೋದನೆ, ಸಂಪನ್ಮೂಲ ಕ್ರೋಢಿಕರಣ, ಕರ ಸಂಗ್ರಹ ಸದ್ಬಳಕೆ ಮತ್ತಿತರ ಸೌಲಭ್ಯ ಹಾಗೂ ಯೋಜನೆಗಳ ಯಶಸ್ಸಿನ ಸಾಧನೆಗೆ ಪುರಸ್ಕಾರ ಸಂದಿರುವುದು ಸಂತಸದ ವಿಷಯವಾಗಿದೆ ಎಂದು ಗ್ರಾ.ಪಂ. ಕಾರ್ಯದರ್ಶಿ ಜೋಕಿಂ ಕೊರ್ಡೇರೊ ಹೇಳುತ್ತಾರೆ.
ಮಲೆನಾಡಿನಲ್ಲಿ ಗ್ರಾಮ ಪಂಚಾಯಿತಿಗಳು ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಹಿಂದೆ ಬಿದ್ದಿಲ್ಲ. ಆದರೂ ಸೇವೆ ನೀಡಿದ ಶೇಕಡಾವಾರು ಲೆಕ್ಕಾಚಾರದ ವಿಷಯದಲ್ಲಿ ಗಣನೀಯ ಅಂಕ ಪಡೆದು ಈ ಬಾರಿ ಮೂಡಿಗೆರೆ ತಾಲ್ಲೂಕಿನ ಜಾವಳಿ ಗ್ರಾ.ಪಂ.ಗಾAಧಿ ಗ್ರಾಮದ ಪುರಸ್ಕಾರದ ಪುಕ್ಕ ತನ್ನ ಮಡಿಲಿಗೆ ಸೆಳೆದಿದೆ. ಪುರಸ್ಕಾರದ ಸಾಧನೆಗೆ ಕಚೇರಿ ಸಿಬ್ಬಂದಿ ಹಾಗೂ ಅಧಿಕಾರಿ ವರ್ಗ, ಗ್ರಾಮ ಪಂಚಾಯಿತಿ ಸದಸ್ಯರ ಶ್ರಮ, ಗ್ರಾಮಸ್ಥರ ಸರ್ವ ಸಹಕಾರದಿಂದ ಇವೆಲ್ಲ ಸಾಧ್ಯವಾಗಿದೆ. ಒಂದು ಕೈಯಿಂದ ಚಪ್ಪಾಳೆ ತಟ್ಟಲು ಸಾಧ್ಯವಿಲ್ಲ ಹೇಗೋ ಹಾಗೆ ಎಲ್ಲಾ ಕಾರ್ಯಗಳು ಒಬ್ಬರಿಂದ ನಿರ್ವಹಿಸಲು ಸಾಧ್ಯವಿಲ್ಲ. ಸಂಘಟಿತರಾಗಿ ಮಾಡಿದ ಕಾರ್ಯ ಈ ಭಾರಿ ಫಲಭರಿತವಾಗಿದೆ. ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ -ಎಂ.ಪಿ.ಪ್ರದೀಪ್, ಗ್ರಾ.ಪಂ.ಅಧ್ಯಕ್ಷ.
ನಮ್ಮ ಗ್ರಾಮ ಪಂಚಾಯಿತಿಗೆ ಪುರಸ್ಕಾರ ಬಂತೆಂದರೆ ಎಲ್ಲರ ಸಹಕಾರದ ಫಲ. ಪ್ರಶಸ್ತಿ ಬಂದರೆ ಜವಾಬ್ದಾರಿ ಮತ್ತಷ್ಟು ಹೆಚ್ಚುತ್ತಿದೆ ಎಂದರ್ಥ. ಇನ್ನಷ್ಟು ಕಾರ್ಯ ಸಾಧನೆ ಮಾಡಲು ಹುಮ್ಮಸ್ಸು ಇಮ್ಮಡಿಯಾಗುತ್ತದೆ.ಪರೋಕ್ಷ ಹಾಗೂ ಪ್ರತ್ಯಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು. -ಬಿ.ಆರ್.ಯತೀಶ್ ಕುಮಾರ್ ಗ್ರಾ.ಪಂ.ಪಿಡಿಒ.
– ವರದಿ-ತನು ಕೊಟ್ಟಿಗೆಹಾರ












