ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಬಸ್ ಹತ್ತುವ ಗೊಂದಲ ಮತ್ತು ನೂಕುನುಗ್ಗಲನ್ನು ದುರುಪಯೋಗಪಡಿಸಿಕೊಂಡ ಕಳ್ಳರು ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್ನಲ್ಲಿದ್ದ ಸುಮಾರು 1.5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ನೆಕ್ಲೇಸ್ ಕಳ್ಳತನ ಮಾಡಿರುವ ಘಟನೆ ಚಿಕ್ಕಮಗಳೂರು ಬಸ್ ನಿಲ್ದಾಣದಲ್ಲಿ ನಡೆದಿದೆ. ಈ ಸಂಬಂಧ ಆಲ್ದೂರಿನ ನಿವಾಸಿ ಮಹಿಳೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೇ 16ರಂದು ಮಧ್ಯಾಹ್ನ ಹಾಸನ ಜಿಲ್ಲೆಯ ಖ್ಯಾತನಹಳ್ಳಿಗೆ ತೆರಳಲು ಆಲ್ದೂರಿನಿಂದ ಚಿಕ್ಕಮಗಳೂರು ಬಸ್ ನಿಲ್ದಾಣಕ್ಕೆ ಮಹಿಳೆ ಬಂದಿದ್ದರು. ತಮ್ಮ ವ್ಯಾನಿಟಿ ಬ್ಯಾಗ್ನೊಳಗಿನ ಬಾಕ್ಸ್ನಲ್ಲಿ 15 ಗ್ರಾಂ ತೂಕದ ಚಿನ್ನದ ನೆಕ್ಲೇಸ್ ಅನ್ನು ಸುರಕ್ಷಿತವಾಗಿ ಇಟ್ಟುಕೊಂಡಿದ್ದರು. ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಹಾಸನಕ್ಕೆ ತೆರಳುವ ಬಸ್ ಪ್ಲಾಟ್ಫಾರ್ಮ್ಗೆ ಬಂದಾಗ ಪ್ರಯಾಣಿಕರ ಭಾರಿ ನೂಕುನುಗ್ಗಲು ಉಂಟಾಗಿತ್ತು. ಇದೇ ಸಂದರ್ಭವನ್ನು ಬಳಸಿಕೊಂಡ ಅಪರಿಚಿತರು, ಮಹಿಳೆಯ ಗಮನವನ್ನು ಬೇರೆಡೆ ಸೆಳೆದು ಚಾಣಾಕ್ಷತನದಿಂದ ವ್ಯಾನಿಟಿ ಬ್ಯಾಗ್ನ ಜಿಪ್ ತೆರೆದು ಒಳಗಿದ್ದ ನೆಕ್ಲೇಸ್ ಬಾಕ್ಸ್ ಅನ್ನು ಕಳವು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಬಸ್ ಒಳಗೆ ಹೋದ ಬಳಿಕ ಬ್ಯಾಗ್ ಪರಿಶೀಲಿಸಿದ ಮಹಿಳೆಗೆ ಜಿಪ್ ತೆರೆದಿರುವುದು ಕಂಡುಬಂದಿದ್ದು, ಆತಂಕದಿಂದ ಪರಿಶೀಲಿಸಿದಾಗ ಚಿನ್ನದ ನೆಕ್ಲೇಸ್ ಇದ್ದ ಬಾಕ್ಸ್ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಕಳ್ಳತನವಾಗಿರುವ ಚಿನ್ನದ ಒಡವೆಯ ಅಂದಾಜು ಮೌಲ್ಯ ₹1,50,000 ಎಂದು ತಿಳಿದುಬಂದಿದೆ. ಘಟನೆ ಬಳಿಕ ಆರೋಪಿಗಳನ್ನು ಪತ್ತೆಹಚ್ಚುವ ಉದ್ದೇಶದಿಂದ ಮಹಿಳೆ ಮೂರು ದಿನಗಳ ಕಾಲ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಬಳಿಕ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಬಸ್ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.












