ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮನೆಯ ಮುಂಭಾಗ ನಿಲ್ಲಿಸಿದ್ದ ಎಲೆಕ್ಟ್ರಿಕ್ ಸ್ಕೂಟರ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಈಶ್ವರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಮಂಜುನಾಥ್ ಅವರಿಗೆ ಸೇರಿದ ಇ-ಸ್ಕೂಟರ್ ಇದಾಗಿದ್ದು, ಎರಡು ವರ್ಷಗಳ ಹಿಂದೆ ವಾಹನವನ್ನು ಖರೀದಿಸಲಾಗಿತ್ತು. ಘಟನೆಯ ವೇಳೆ ಸ್ಕೂಟರ್ ಮನೆಯ ಮುಂದೆ ನಿಲ್ಲಿಸಲಾಗಿದ್ದು, ಏಕಾಏಕಿ ಬೆಂಕಿ ಕಾಣಿಸಿಕೊಂಡು ಕೆಲವೇ ಕ್ಷಣಗಳಲ್ಲಿ ಸಂಪೂರ್ಣ ವಾಹನ ಹೊತ್ತಿ ಉರಿದಿದೆ.

ಸ್ಕೂಟರ್ ಖರೀದಿ ಸಮಯದಲ್ಲಿ ಐದು ವರ್ಷಗಳ ಇನ್ಸೂರೆನ್ಸ್ ಮೊತ್ತವನ್ನು ಪಾವತಿಸಲಾಗಿತ್ತು. ಆದರೆ ಘಟನೆ ಬಳಿಕ ವಾಹನ ಮಾಲೀಕರು ಸಂಬಂಧಿಸಿದ ಶೋರೂಮ್ ಸಂಪರ್ಕಿಸಿದಾಗ, ಇಂತಹ ಬೆಂಕಿ ಅವಘಡಗಳು ವಿಮೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಿಬ್ಬಂದಿ ಉತ್ತರ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಐದು ವರ್ಷದ ವಿಮೆ ಇದ್ದರೂ ಯಾವುದೇ ಸಹಾಯ ಸಿಗದ ಹಿನ್ನೆಲೆಯಲ್ಲಿ ಶೋರೂಮ್ ಸಿಬ್ಬಂದಿಯ ನಡೆಗೆ ವಾಹನ ಮಾಲೀಕ ಮಂಜುನಾಥ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.












