ತರೀಕೆರೆ: (ನ್ಯೂಸ್ ಮಲ್ನಾಡ್ ವರದಿ) ಸ್ನೇಹಿತರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ನಡೆದಿದೆ. ಉತ್ತರಪ್ರದೇಶ ಮೂಲದ ಸರ್ಫ್ರಾಜ್ ಅನ್ಸಾರಿ (35) ಕೊಲೆಯಾದ ದುರ್ದೈವಿ.
ಇದನ್ನೂ ಓದಿ: ಬಸ್ ಗಳ ಸುರಕ್ಷತೆಗೆ ಮಹತ್ವದ ಕ್ರಮ; ಈ ನಿಯಮಗಳ ಪಾಲನೆ ಕಡ್ಡಾಯ!

ರಿಯಾಜ್, ಅರಿಫ್, ಛೋಟು, ಸತಾರಾಂ ಕೊಲೆ ಮಾಡಿ ಊರು ತೊರೆದಿದ್ದಾರೆ. ಉತ್ತರಪ್ರದೇಶ ಮೂಲದ ಐವರು ಯುವಕರು ಪಟ್ಟಣದ ಡಿವಿಜಿ ರಸ್ತೆಯ ಬಾಡಿಗೆ ಮನೆಯೊಂದರಲ್ಲಿ ನೆಲೆಸಿ ಟೈಲ್ಸ್ ಕೆಲಸ ಮಾಡಿಕೊಂಡಿದ್ದರು. ಸೋಮವಾರ ತಡರಾತ್ರಿ ಗಲಾಟೆ ಮಾಡಿಕೊಂಡಿದ್ದು, ಎಲ್ಲರೂ ಸೇರಿ ಸರ್ಫ್ರಾಜ್ ಅನ್ಸಾರಿಗೆ ದೊಣ್ಣೆಯಿಂದ ಹಲ್ಲೆ ನಡೆಸಿ ಹತ್ಯೆಗೈದು ರಾತ್ರೋರಾತ್ರಿ ಪರಾರಿಯಾಗಿದ್ದಾರೆ.
ಇವರೆಲ್ಲರಿಗೂ ಕೆಲಸ ಕೊಡುತ್ತಿದ್ದ ಮೇಸ್ತ್ರಿ ಪದೇಪದೆ ಫೋನ್ ಮಾಡಿದರೂ ಪ್ರತಿಕ್ರಿಯೆ ಇಲ್ಲದ ಹಿನ್ನೆಲೆಯಲ್ಲಿ ಮರುದಿನ ಡಿವಿಜಿ ರಸ್ತೆಯ ಬಾಡಿಗೆ ಮನೆಗೆ ಬಂದು ನೋಡಿದ್ದಾರೆ. ಸರ್ಫ್ರಾಜ್ ಅನ್ಸಾರಿ ಕೊಲೆಯಾಗಿರುವುದನ್ನು ಗಮನಿಸಿ ಸ್ಥಳೀಯರ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಟ್ಟಣ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆಯಾದ ಸರ್ಫ್ರಾಜ್ ಅನ್ಸಾರಿ ಉತ್ತರ ಪ್ರದೇಶದವರಾದ ಕಾರಣ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿ ಸರ್ಕಾರಿ ಆಸ್ಪತ್ರೆ ಶವಾಗಾರದಲ್ಲಿ ಇರಿಸಿದ್ದಾರೆ.
ಇದನ್ನೂ ಓದಿ: ರಾಜ್ಯದ ಪೊಲೀಸ್ ಸಿಬ್ಬಂದಿಗಳ ಸ್ಲೋಚ್ ಕ್ಯಾಪ್ ಗೆ ಗುಡ್ ಬೈ; ಪೊಲೀಸ್ ಪೇದೆಗಳಿಗೆ ಹೊಸ ಟೋಪಿ












