ಎನ್. ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಸಿದ್ದರಮಠದ ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಜೂನ್ 30ರಂದು ಶ್ರೀ ಸಿದ್ದರಂಗ ಟ್ರಸ್ಟ್, ಶ್ರೀ ಸಿದ್ದೇಶ್ವರ ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ವಿಕಾಸ ಸ್ವಸಹಾಯ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು.
ಶ್ರೀ ಭಾರತಿ ತೀರ್ಥ ಮಹಾಸ್ವಾಮೀಜಿ ಮೊಬೈಲ್ ಆಸ್ಪತ್ರೆ ಹಾಗೂ ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಶಿಬಿರದಲ್ಲಿ ಭಾಗವಹಿಸಿ ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸಿದರು. ಶಿಬಿರದಲ್ಲಿ ಸುಮಾರು 160 ಮಂದಿಯ ಆರೋಗ್ಯ ತಪಾಸಣೆ ನಡೆಸಲಾಗಿದ್ದು, 15 ಮಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ವೈದ್ಯರಾದ ಡಾ. ಪ್ರವೀಣ್, ಡಾ. ಲಕ್ಷ್ಮೀನಾರಾಯಣ, ಡಾ. ಸುಷ್ಮಾ, ಡಾ. ಅನುಪಮ, ಡಾ. ಮಹೇಶ್, ಡಾ. ರೇಣುಕಾರಾಧ್ಯ ಹಾಗೂ ಆಸ್ಪತ್ರೆಯ ಸಿಬ್ಬಂದಿ ಸೇವೆ ಸಲ್ಲಿಸಿದರು. ಆಸ್ಪತ್ರೆಯ ಸಂಯೋಜಕರಾದ ಕಿರಣ್, ಯುವ ಮುಖಂಡರಾದ ಎಂಎಸ್ ಶಶಿಧರ್ ಕರಿಗೆರಸಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ದರಂಗ ಟ್ರಸ್ಟ್, ಶ್ರೀ ಸಿದ್ದೇಶ್ವರ ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ವಿಕಾಸ ಸ್ವಸಹಾಯ ಸಂಘದ ಅಧ್ಯಕ್ಷರು, ನಿರ್ದೇಶಕರು, ಸದಸ್ಯರು ಮತ್ತು ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಭಾಗವಹಿಸಿ ಶಿಬಿರದ ಯಶಸ್ಸಿಗೆ ಸಹಕರಿಸಿದರು.












