ಮೂಡಿಗೆರೆ: ಇನ್ಮುಂದೆ ಮೊಬೈಲ್ ಆ್ಯಪ್ ಮೂಲಕವೇ ರೈತರಿಗೆ ರಸಗೊಬ್ಬರ ಖರೀದಿ ಅವಕಾಶ

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ತರುವುದರ ಜೊತೆಗೆ ರೈತರಿಗೆ ಸಕಾಲದಲ್ಲಿ ಅಗತ್ಯ ಪ್ರಮಾಣದ ರಸಗೊಬ್ಬರ ಲಭ್ಯವಾಗುವಂತೆ ಮಾಡಲು ರಾಷ್ಟ್ರೀಯ ರಸಗೊಬ್ಬರ ಮಾರಾಟ ಚೌಕಟ್ಟು (FFS) ಜಾರಿಗೊಳಿಸಲಾಗುತ್ತಿದೆ. ಈ ವ್ಯವಸ್ಥೆಯಡಿ ರೈತರು ಮೊಬೈಲ್ ಆ್ಯಪ್ ಮೂಲಕವೇ ರಸಗೊಬ್ಬರವನ್ನು ಮುಂಗಡವಾಗಿ ಕಾಯ್ದಿರಿಸಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಚಿಕ್ಕಮಗಳೂರು ಉಪವಿಭಾಗದ ಉಪ ಕೃಷಿ ನಿರ್ದೇಶಕಿ ಕುಮುದ ತಿಳಿಸಿದರು.

ಮೂಡಿಗೆರೆ ಮತ್ತು ಕಳಸ ತಾಲ್ಲೂಕುಗಳ ಕೃಷಿ ಇಲಾಖೆ ವತಿಯಿಂದ ಕೃಷಿ ಪರಿಕರ ಮಾರಾಟಗಾರರು ಹಾಗೂ ಕೃಷಿ ಸಖಿಯರಿಗಾಗಿ ಮೂಡಿಗೆರೆಯ ZAHRSನಲ್ಲಿ ಆಯೋಜಿಸಿದ್ದ ರಸಗೊಬ್ಬರ ಮಾರಾಟ ಚೌಕಟ್ಟಿನ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೊಸ ವ್ಯವಸ್ಥೆಯಡಿ ರೈತರು ಗೂಗಲ್ ಪ್ಲೇ ಸ್ಟೋರ್‌ನಿಂದ ‘ಫ್ರೇಮ್‌ವರ್ಕ್ ಫಾರ್ ಫರ್ಟಿಲೈಸರ್’ (FFS) ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಆಧಾರ್ ಸಂಖ್ಯೆಯ ಮೂಲಕ ಇ-ಕೆವೈಸಿ ದೃಢೀಕರಿಸಬೇಕು. ನಂತರ ಅಗ್ರಿಸ್ಟ್ಯಾಕ್ ಮೂಲಕ ಜಮೀನಿನ ವಿವರಗಳು ಸ್ವಯಂಚಾಲಿತವಾಗಿ ಲಭ್ಯವಾಗಲಿವೆ. ಮಾಹಿತಿ ಲಭ್ಯವಾಗದಿದ್ದಲ್ಲಿ ಸರ್ವೆ ನಂಬರ್ ನಮೂದಿಸಿ ಬೆಳೆ ವಿವರಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಎಫ್‌ಐಡಿ ಮೂಲಕವೂ ನೋಂದಣಿಗೆ ಅವಕಾಶವಿದೆ ಎಂದು ವಿವರಿಸಿದರು.

ರೈತರ ಜಮೀನಿನ ವಿಸ್ತೀರ್ಣ ಮತ್ತು ಬೆಳೆ ಆಧರಿಸಿ ಅಗತ್ಯವಿರುವ ಸಾಮಾನ್ಯ ರಸಗೊಬ್ಬರದ ಶಿಫಾರಸು ಪ್ರಮಾಣವನ್ನು ಆ್ಯಪ್ ಮೂಲಕವೇ ತಿಳಿಯಬಹುದು. ಅರ್ಜಿ ಸಲ್ಲಿಸುವಾಗ ಆಧಾರ್ ಇ-ಕೆವೈಸಿ ಹಾಗೂ ಮೊಬೈಲ್ ಒಟಿಪಿ ದೃಢೀಕರಣ ಕಡ್ಡಾಯವಾಗಿದ್ದು, ನೀಡಿರುವ ಮಾಹಿತಿ ಸರಿಯಾಗಿದೆ ಎಂಬ ಸ್ವಯಂ ಘೋಷಣೆಯನ್ನೂ ಸಲ್ಲಿಸಬೇಕಾಗುತ್ತದೆ.

ಸ್ವಂತ ಜಮೀನು ಹೊಂದಿರುವ ರೈತರಷ್ಟೇ ಅಲ್ಲದೆ, ಪಾಲುದಾರ ಕೃಷಿಕರು, ಅರಣ್ಯ ಹಕ್ಕುಪತ್ರ ಹೊಂದಿರುವವರು ಹಾಗೂ ದೇವಾಲಯ ಮತ್ತು ಸರ್ಕಾರಿ ಜಮೀನುಗಳಲ್ಲಿ ಕೃಷಿ ಮಾಡುವವರಿಗೂ ರಸಗೊಬ್ಬರ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ರೈತರು ಆ್ಯಪ್ ಮೂಲಕ ಕ್ಯೂಆರ್ ಕೋಡ್ ಪಡೆದು, ಟೋಕನ್ ಸಂಖ್ಯೆಯ ಆಧಾರದ ಮೇಲೆ ತಾವು ಆಯ್ಕೆ ಮಾಡಿಕೊಂಡ ಮಾರಾಟ ಕೇಂದ್ರದಿಂದ ರಸಗೊಬ್ಬರ ಖರೀದಿಸಬಹುದು.

ಈ ವ್ಯವಸ್ಥೆಯಿಂದ ರೈತರು ಮನೆಯಲ್ಲಿಯೇ ಕುಳಿತು ಸ್ಮಾರ್ಟ್‌ಫೋನ್ ಮೂಲಕ ರಸಗೊಬ್ಬರದ ಅಗತ್ಯವನ್ನು ಮುಂಗಡವಾಗಿ ದಾಖಲಿಸಿ, ಸಮೀಪದ ಮಾರಾಟ ಕೇಂದ್ರದಲ್ಲಿ ಗೊಬ್ಬರ ಕಾಯ್ದಿರಿಸಿಕೊಳ್ಳಬಹುದು. ಇದರಿಂದ ರೈತರ ಸಮಯ ಮತ್ತು ಶ್ರಮ ಉಳಿತಾಯವಾಗುವುದರ ಜೊತೆಗೆ ರಸಗೊಬ್ಬರ ವಿತರಣೆಯಲ್ಲಿ ಪಾರದರ್ಶಕತೆ ಹೆಚ್ಚಲಿದೆ ಎಂದು ಸಹಾಯಕ ಕೃಷಿ ನಿರ್ದೇಶಕಿ ಸುಮ ತಿಳಿಸಿದರು.

ಕಾರ್ಯಕ್ರಮದಲ್ಲಿ ZAHRS ಮುಖ್ಯಸ್ಥ ಎ.ಟಿ. ಕೃಷ್ಣಮೂರ್ತಿ, ಕೃಷಿ ಅಧಿಕಾರಿ ಅಮರೇಶ್ ಹಾಗೂ ಆತ್ಮ ಸಿಬ್ಬಂದಿ ಉಪಸ್ಥಿತರಿದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.