
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಭಾರತೀಯ ಬೌದ್ಧ ಮಹಾಸಭಾದ ಮೂಡಿಗೆರೆ ತಾಲ್ಲೂಕು ಶಾಖೆಯ ಖಜಾಂಚಿ ಮಹೇಶ್ ಉದುಸೆ ಅವರ ಮನೆಯಲ್ಲಿ ನವೆಂಬರ್ 24ರ ಮಂಗಳವಾರ ಕಾರ್ತಿಕ ಮಾಸದ ಬುದ್ಧ ಹುಣ್ಣಿಮೆ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಮಹೇಶ್ ಉದುಸೆ ಅವರ ಕುಟುಂಬದವರು ಹಾಗೂ ಗ್ರಾಮದ ಗ್ರಾಮಸ್ಥರು ಒಟ್ಟಾಗಿ ಸೇರಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಸೈನಿಕ ಚಂದ್ರಶೇಖರ್ ಅವರು, ಬುದ್ಧ ಮತ್ತು ಅಂಬೇಡ್ಕರ್ ಅವರ ವಿಚಾರಧಾರೆಗಳು ಮನೆಮನೆಗೂ ತಲುಪಬೇಕು. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಆಶಿಸಿದರು.
ಮಹೇಂದ್ರ ಮೌರ್ಯ ಅವರು ಮಾತನಾಡಿ, ಇಂದಿನ ಜಗತ್ತಿಗೆ ಬುದ್ಧನ ವಿಚಾರಧಾರೆಗಳು ಏಕೆ ಅನಿವಾರ್ಯ ಮತ್ತು ಅಗತ್ಯ ಎಂಬುದನ್ನು ವಿವರಿಸಿದರು. ವಕೀಲರಾದ ಕಾವೇರಿ ಅವರು ಬುದ್ಧ ಮತ್ತು ಅಂಬೇಡ್ಕರ್ ಅವರ ವಿಶೇಷತೆ, ತತ್ವಾದರ್ಶ ಹಾಗೂ ಸಮಾಜಕ್ಕೆ ಅವರು ನೀಡಿದ ಕೊಡುಗೆಗಳ ಕುರಿತು ನೆರೆದಿದ್ದವರಿಗೆ ತಿಳಿಸಿಕೊಟ್ಟರು.

ಬುದ್ಧನ ಶಾಂತಿ, ಸಮಾನತೆ, ಕರುಣೆ ಹಾಗೂ ಮಾನವೀಯತೆಯ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಭಾರತೀಯ ಬೌದ್ಧ ಮಹಾಸಭಾದ ತಾಲ್ಲೂಕು ಶಾಖೆಯ ಅಧ್ಯಕ್ಷರಾದ ನಿವೃತ್ತ ಶಿಕ್ಷಕ ಹಾಲಯ್ಯ, ಉಪಾಧ್ಯಕ್ಷರಾದ ನಿವೃತ್ತ ಸೈನಿಕ ಚಂದ್ರಶೇಖರ್, ನಿವೃತ್ತ ಉಪ ತಹಶೀಲ್ದಾರ್ ಬಿ.ಪಿ. ಮಂಜುನಾಥ್ ಹಾಗೂ ವಕೀಲರಾದ ಕಾವೇರಿ ಉಪಸ್ಥಿತರಿದ್ದರು. ಮಹಾ ಪೋಷಕರಾದ ಮಹೇಂದ್ರ ಮೌರ್ಯ, ಯು.ಬಿ. ಮಂಜಯ್ಯ, ಪಿ.ಕೆ. ಮಂಜುನಾಥ್ ಸೇರಿದಂತೆ ಮುಖಂಡರಾದ ಬಕ್ಕಿ ರವಿ, ಯು.ಬಿ. ನಾಗೇಶ್, ರವಿ ಚಿನ್ನಿಗ, ಗಿರೀಶ್, ಅಬ್ದಾರೆ ಕುಮಾರ್ ಕಿರುಗುಂದ, ಮಲ್ಲೇಶ್ ಅನಜೂರು, ನವೀನ್ ಕಣಚೂರು ಹಾಗೂ ರಮೇಶ್ ದಿಣ್ಣೆಕೆರೆ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಹಾಲಯ್ಯ ಮಾಸ್ಟರ್ ಹಾಗೂ ಪಿ.ಕೆ. ಮಂಜುನಾಥ್ ಅವರು ಬುದ್ಧ ವಂದನೆ ಕಾರ್ಯಕ್ರಮವನ್ನು ನೆರವೇರಿಸಿದರು.












