ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಜೇನು ನೊಣಗಳು ದಾಳಿ ನಡೆಸಿದ ಪರಿಣಾಮ, ರೈತರೊಬ್ಬರು ಮೃತಪಟ್ಟಿರುವ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ಸಂಭವಿಸಿದೆ. ಸಖರಾಯಪಟ್ಟಣ ನಿವಾಸಿ ಕರಿಯಾನಾಯ್ಕ (61) ಮೃತಪಟ್ಟ ದುರ್ದೈವಿ ರೈತ.
ಇದನ್ನೂ ಓದಿ: ಈ ಕುಟುಂಬಗಳಿಗೆ ಎಲ್ಪಿಜಿ ಗ್ಯಾಸ್ ಸಿಗಲ್ಲ; ಸರ್ಕಾರದ ಹೊಸ ನಿಯಮ

ಕರಿಯಾನಾಯ್ಕ ಅವರು ತಮ್ಮ ತೋಟದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ, ಮರದ ಮೇಲಿದ್ದ ಜೇನು ನೊಣಗಳು ಏಕಾಏಕಿ ಹಿಂಡು ಹಿಂಡಾಗಿ ದಾಳಿ ಮಾಡಿವೆ. ಜೇನು ಕಡಿತದ ತೀವ್ರತೆಗೆ ಕರಿಯಾನಾಯ್ಕ ಅವರು ಸ್ಥಳದಲ್ಲೇ ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಸಖರಾಯಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು.
ಪ್ರಾಥಮಿಕ ಚಿಕಿತ್ಸೆಯ ನಂತರ ಕರಿಯಾನಾಯ್ಕ ಅವರ ಸ್ಥಿತಿ ಗಂಭೀರವಾಗಿದ್ದರಿಂದ, ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ಸಲಹೆಯಂತೆ ಚಿಕ್ಕಮಗಳೂರಿಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ. ದಾಳಿಯ ವೇಳೆ ಅವರ ಮಗ ಪ್ರದೀಪ್ ಕೂಡ ಜೇನು ನೊಣಗಳ ಕಡಿತಕ್ಕೆ ಒಳಗಾಗಿದ್ದರೂ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ಮಾ.18 ರಿಂದ SSLC ಪರೀಕ್ಷೆ ಆರಂಭ; ವಿದ್ಯಾರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ
ಘಟನೆಗೆ ಸಂಬಂಧಿಸಿದಂತೆ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












