(Ex-ACP K.N. Ramesh: ) ಕಾರ್ಗಿಲ್ ರಮೇಶ್ ಎಂದೇ ಜನಪ್ರಿಯರಾಗಿದ್ದ ದಕ್ಷ ಪೊಲೀಸ್ ಅಧಿಕಾರಿ ಕೆ.ಎನ್. ರಮೇಶ್ ಅವರು ನಿಧನರಾಗಿದ್ದು, ಪೊಲೀಸ್ ಇಲಾಖೆ ಹಾಗೂ ಆಪ್ತ ವಲಯದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ. ಸುಮಾರು 30 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಗೆ ಜನಸೇವೆಯಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದರು.
1965ರ ಮೇ 3ರಂದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗಾ ಗ್ರಾಮದಲ್ಲಿ ಜನಿಸಿದ ರಮೇಶ್ ಅವರು, ತಂದೆ ನಾಗರಾಜ್ ಹಾಗೂ ತಾಯಿ ನಾಗರತ್ನಮ್ಮ ದಂಪತಿಯ ಮೂರನೇ ಪುತ್ರರಾಗಿದ್ದರು. ಅಣ್ಣ ಬಾಲಸುಬ್ರಮಣ್ಯ ಹಾಗೂ ಅಕ್ಕ ಶಾಂತಮ್ಮ ಅವರೊಂದಿಗೆ ಬೆಳೆದ ಅವರು ಬಾಲ್ಯದಲ್ಲೇ ಚುರುಕು ಹಾಗೂ ನಾಯಕತ್ವ ಸ್ವಭಾವ ಹೊಂದಿದ್ದರು.

ಪ್ರಾಥಮಿಕ ಶಿಕ್ಷಣವನ್ನು ಕಿಗ್ಗಾದಲ್ಲೇ ಪೂರ್ಣಗೊಳಿಸಿದ ಅವರು, ಎ.ಎಸ್.ಆರ್.ಪಿ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದು, ಶ್ರೀ ಜೆಸಿಬಿಎಮ್ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದರು. ನಂತರ ದಾವಣಗೆರೆಯಲ್ಲಿ ಬಿಎಡ್ ಪದವಿ ಪಡೆದರು.
ದೇಶಪ್ರೇಮವನ್ನು ಹೃದಯದಲ್ಲಿ ಹೊತ್ತಿದ್ದ ರಮೇಶ್ ಅವರು ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್.) ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಎನ್.ಸಿ.ಸಿ ಯಲ್ಲೂ ಸಕ್ರಿಯರಾಗಿದ್ದು, ನಾಲ್ಕು ಆಲ್ ಇಂಡಿಯಾ ಕ್ಯಾಂಪ್‌ಗಳಲ್ಲಿ ಪಾಲ್ಗೊಂಡಿದ್ದರು. ಕ್ರೀಡಾ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು.
ಪೊಲೀಸ್ ಸೇವೆಗೆ ಸೇರುವ ಮೊದಲು ಸುಮಾರು ಮೂರು ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಅವರು, ಬಳಿಕ ಪೊಲೀಸ್ ಇಲಾಖೆಗೆ ಸೇರಿ ಪ್ರೊಬೆಷನರಿ ಅಧಿಕಾರಿ, ಡಿವೈಎಸ್ಪಿ ಹಾಗೂ ಎಸಿಪಿಯಾಗಿ ವಿವಿಧ ಹುದ್ದೆಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದರು.
ಲೋಕಾಯುಕ್ತ ಹಾಗೂ ಗುಪ್ತಚರ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದ ರಮೇಶ್ ಅವರು ತಮ್ಮ ನಿಷ್ಠೆ, ಪ್ರಾಮಾಣಿಕತೆ ಹಾಗೂ ದಿಟ್ಟ ನಿರ್ಧಾರಗಳಿಂದ ಹೆಸರು ಮಾಡಿದ್ದರು. ವಿಶೇಷವಾಗಿ ಮಾಲೂರಿನಲ್ಲಿ ಪೊಲೀಸ್ ವ್ಯವಸ್ಥೆಯನ್ನು ಶಿಸ್ತಿನ ಮಾರ್ಗದಲ್ಲಿ ನಡೆಸಿದ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು.
1994ರ ಸಬ್ ಇನ್‌ಸ್ಪೆಕ್ಟರ್ ಬ್ಯಾಚ್‌ನ ಅಧಿಕಾರಿಯಾಗಿದ್ದ ಕೆ.ಎನ್. ರಮೇಶ್ ಅವರು, ಕೋಲಾರ ರೂರಲ್ ಪೊಲೀಸ್ ಠಾಣೆಯಿಂದ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. ನಂತರ ಶ್ರೀನಿವಾಸಪುರ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಸೇರಿದಂತೆ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿ, ಬೆಂಗಳೂರು ನಗರದಲ್ಲಿಯೂ ತಮ್ಮ ಕರ್ತವ್ಯನಿಷ್ಠೆಯಿಂದ ಗುರುತಿಸಿಕೊಂಡಿದ್ದರು. ಬಳಿಕ ಚನ್ನಪಟ್ಟಣದಲ್ಲಿ ಡಿವೈಎಸ್‌ಪಿ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು.
ಜನಸೇವೆಗೆ ಸದಾ ಒತ್ತು ನೀಡುತ್ತಿದ್ದ ಅವರು ಗೋಶಾಲೆ ಸ್ಥಾಪನೆಯಂತಹ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದರು. ಶಿಡ್ಲಘಟ್ಟದಿಂದ ಆರಂಭವಾದ ಅವರ ಸಾರ್ವಜನಿಕ ಸೇವಾ ಪಯಣ ಅನೇಕ ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.
ಸರಳತೆ, ಕರ್ತವ್ಯನಿಷ್ಠೆ ಹಾಗೂ ದೇಶಭಕ್ತಿಯ ಪ್ರತಿರೂಪವಾಗಿದ್ದ ಕೆ.ಎನ್. ರಮೇಶ್ ಅವರ ನಿಧನ ಸಮಾಜಕ್ಕೆ ಹಾಗೂ ಪೊಲೀಸ್ ಇಲಾಖೆಗೆ ಅಪಾರ ನಷ್ಟವಾಗಿದೆ. ಅವರ ಸೇವೆ ಮತ್ತು ಆದರ್ಶಗಳು ಸದಾ ಸ್ಮರಣೀಯವಾಗಿರಲಿವೆ.












