ಶಿಕಾರಿಪುರ: (ನ್ಯೂಸ್ ಮಲ್ನಾಡ್ ವರದಿ) ತಾಲ್ಲೂಕಿನ ಅರಶಿಣಗೆರೆ ಗ್ರಾಮದಲ್ಲಿ ಮಳೆ- ಗಾಳಿಯಿಂದಾಗಿ ಮನೆ ಮುಂದಿನ ತಗಡಿನ ಚಾವಣಿ ಕುಸಿದು ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ನಿಸಾರ್ ಅಹಮದ್ (52) ಮೃತ ವ್ಯಕ್ತಿ.
ರಾತ್ರಿ ಊಟವಾದ ನಂತರ ಮನೆ ಎದುರು ಕುಳಿತಿದ್ದರು. ಈ ವೇಳೆ ಗಾಳಿ-ಮಳೆ ಆರಂಭಗೊಂಡು ಒಮ್ಮೆಲೆ ಚಾವಣಿ ಮೈಮೇಲೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು.

ಅವರ ಮಗ ಹಾಗೂ ಅಕ್ಕಪಕ್ಕದ ಮನೆಯವರು ತಗಡಿನ ಅಡಿಯಲ್ಲಿ ಸಿಲುಕಿದ್ದ ಅವರನ್ನು ರಕ್ಷಿಸಿ ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಅವರು ಮೃತಪಟ್ಟಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













