ಎನ್.ಆರ್.ಪುರ: ( ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಹೆಬ್ಬೆ ಹುಲಿ ಸಂರಕ್ಷಿತ ಅರಣ್ಯ ವಲಯದ ಮೋರಿಮಠ ಸರ್ವೇ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಅರಣ್ಯ ಸಿಬ್ಬಂದಿ ಗಾಯಗೊಂಡ ಘಟನೆ ನಡೆದಿದೆ.
ಅರಣ್ಯ ಇಲಾಖೆಯ ವಾಚರ್‌ಗಳಾದ ಹರೀಶ್ (33) ಮತ್ತು ಬಸವರಾಜ್ (35) ಅವರ ಮೇಲೆ ಕಾಡಾನೆ ದಾಳಿ ನಡೆಸಿದೆ.
ವಸತಿ ಗೃಹದ ಸಮೀಪ ನೀರು ತುಂಬಿಸಿಕೊಳ್ಳುತ್ತಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ಮಾಡಿದೆ ಎಂದು ತಿಳಿದುಬಂದಿದೆ. ದಾಳಿಯಲ್ಲಿ ಹರೀಶ್ ಅವರ ಸೊಂಟದ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಬಸವರಾಜ್ ಅವರಿಗೂ ಗಾಯಗಳಾಗಿವೆ.
ಗಾಯಾಳುಗಳನ್ನು ತಕ್ಷಣ ಎನ್.ಆರ್.ಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಹರೀಶ್ ಅವರ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಇಬ್ಬರನ್ನೂ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಬ್ಬಂದಿಯ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಎನ್.ಆರ್.ಪುರ: ಕಾಡಾನೆ ದಾಳಿಗೆ ಅರಣ್ಯ ಸಿಬ್ಬಂದಿ ಗಾಯ: ಇಬ್ಬರು ಆಸ್ಪತ್ರೆಗೆ ದಾಖಲು













