
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ)ನಗರದ ಬಾರ್ ಕ್ಯಾಶಿಯರ್ ತೇಜಸ್ವಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ರುದ್ರ, ವೀರಶೇಖರ್, ವಿನಿ ಹಾಗೂ ಹನುಮಂತ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ ಕೊಟ್ಟ ರಾಜ್ಯ ಸರ್ಕಾರ; ಬೆಂಬಲ ಬೆಲೆ ಯೋಜನೆಯಡಿಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ

ಪೊಲೀಸರ ಮಾಹಿತಿ ಪ್ರಕಾರ, ರುದ್ರ ಕೊಲ್ಕತ್ತಾದ ನಿವಾಸಿಯಾಗಿದ್ದು, ವೀರಶೇಖರ್ ಆಂಧ್ರಪ್ರದೇಶದ ಅದೋನಿಯವನು, ವಿನಿ ತುಮಕೂರು ಮೂಲದವನು ಹಾಗೂ ಹನುಮಂತ ಸ್ಥಳೀಯನಾಗಿದ್ದಾನೆ.

ಘಟನೆಯ ದಿನ ಆರೋಪಿಗಳು ಬಾರ್ ಕ್ಯಾಶಿಯರ್ ತೇಜಸ್ವಿಗೆ ಹಲ್ಲೆ ನಡೆಸಿ ಗ್ರೌಂಡ್ ಗೆ ಎಸೆದಿದ್ದಾರೆ. ಬೆಳಿಗ್ಗೆ ಆಟೋ ಚಾಲಕನೊಬ್ಬ ತೇಜಸ್ವಿ ಉಸಿರಾಡುತ್ತಿರುವುದನ್ನು ಗಮನಿಸಿ ಆಸ್ಪತ್ರೆಗೆ ದಾಖಲಿಸಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮಧ್ಯಾಹ್ನ ತೇಜಸ್ವಿ ಸಾವನ್ನಪ್ಪಿದ್ದಾನೆ.
ಈ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿರುವ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.














