ಎನ್. ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) ಆಸ್ತಿಗಾಗಿ ಹೆತ್ತ ತಾಯಿಯನ್ನೇ ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಂಡಿಮಠ ಗ್ರಾಮದಲ್ಲಿ ನಡೆದಿದೆ. ಕುಸುಮ (62) ಮಗಳಿಂದಲೇ ಹತ್ಯೆಯಾದ ತಾಯಿ.
ಇದನ್ನೂ ಓದಿ: ಬಸ್ ಗಳ ಸುರಕ್ಷತೆಗೆ ಮಹತ್ವದ ಕ್ರಮ; ಈ ನಿಯಮಗಳ ಪಾಲನೆ ಕಡ್ಡಾಯ!

ಸುಧಾ (35) ತಾಯಿಯನ್ನ ಹತ್ಯೆ ಮಾಡಿರುವ ಪುತ್ರಿ. ಒಂದೂವರೆ ಎಕರೆ ಜಮೀನು ಮತ್ತು ಒಂದು ಮನೆಯ ಮೇಲಿನ ಆಸೆಯಿಂದ ಈ ಕೊಲೆ ನಡೆದಿದೆ. ಮೂಲತಃ ಕೂಲಿಗಾಗಿ ಬೇರೆ ಊರಿನಿಂದ ಬಂದು ತಾಲೂಕಿನ ಬಂಡಿಮಠದಲ್ಲಿ ವಾಸವಿದ್ದ ಈ ಕುಟುಂಬದಲ್ಲಿ, ತವರೂರಿನ ಆಸ್ತಿ ಕೈತಪ್ಪಿ ಹೋಗಬಹುದು ಎಂಬ ಭಯ ಮತ್ತು ಆಸೆಯಿಂದ ಸುಧಾ ಈ ಕೃತ್ಯ ಎಸಗಿದ್ದಾಳೆ ಎಂದು ತಿಳಿದು ಬಂದಿದೆ.
ಸೋಮವಾರ ರಾತ್ರಿ ಮಲಗಿದ್ದ ತಾಯಿ ಕುಸುಮಳನ್ನು ತಲೆದಿಂಬಿನಿಂದ ಉಸಿರುಗಟ್ಟಿಸಿ ಮಗಳು ಸುಧಾ ಕೊಲೆ ಮಾಡಿದ್ದಾಳೆ. ತದನಂತರ ಮೃತದೇಹದ ಬಗ್ಗೆ ಯಾವುದೇ ಅನುಮಾನ ಬಾರದಂತೆ ನಾಟಕವಾಡಲು ಯತ್ನಿಸಿದ್ದಳು. ಆದರೆ, ಪೊಲೀಸರ ತನಿಖೆಯಲ್ಲಿ ಇದು ಕೊಲೆ ಎಂಬುದು ದೃಢಪಟ್ಟಿದೆ. ಸದ್ಯ ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸುಧಾಳನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ರಾಜ್ಯದ ಪೊಲೀಸ್ ಸಿಬ್ಬಂದಿಗಳ ಸ್ಲೋಚ್ ಕ್ಯಾಪ್ ಗೆ ಗುಡ್ ಬೈ; ಪೊಲೀಸ್ ಪೇದೆಗಳಿಗೆ ಹೊಸ ಟೋಪಿ












