ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪ ಜಂಬರಘಟ್ಟೆ ಗ್ರಾಮದಲ್ಲಿ ಖಬರಸ್ಥಾನ ಜಾಗದಲ್ಲಿದ್ದ ಮರ ಕಡಿದ ಆರೋಪದಲ್ಲಿ ಎರಡು ಕೋಮಿನವರ ನಡುವೆ ಗಲಾಟೆ ನಡೆದಿದ್ದು, ಈ ಸಂಬಂಧ ಹೊಳೆಹೊನ್ನೂರು ಪೊಲೀಸರು ಜಾತಿ ನಿಂದನೆ ಹಾಗೂ ಗುಂಪುಗಾರಿಕೆ ಹಾಗೂ ಹಲ್ಲೆ ಮಾಡಿದ ಕಾರಣಕ್ಕೆ ಎಫ್.ಐ.ಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ; ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್; ರಾಜ್ಯ ಸರ್ಕಾರದಿಂದ ಬೃಹತ್ ಉದ್ಯೋಗ ಮೇಳ

ಏನಿದು ಘಟನೆ:
ಫೆ.4 ರಂದು (ನಿನ್ನೆ) ಖಬರಸ್ಥಾನದಲ್ಲಿದ್ದ ಮರಗಳನ್ನು ಕಡಿದ ಆರೋಪದಲ್ಲಿ ಹಿಂದು ಯುವಕರ ಮೇಲೆ ಮುಸ್ಲಿಂ ಯುವಕರು ಹಲ್ಲೆ ನಡೆಸಿರುವ ಘಟನೆ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಜಂಬರಘಟ್ಟ ಗ್ರಾಮದಲ್ಲಿ ನಡೆದಿತ್ತು. ಮರ ಕಡಿದಿದ್ದಾರೆ ಎಂಬ ಕಾರಣಕ್ಕೆ ಇಬ್ಬರು ಯುವಕರನ್ನು, ಮಸೀದಿಯಲ್ಲಿ ಮುಸ್ಲಿಂ ಯುವಕರ ಗುಂಪು ಇಟ್ಟುಕೊಂಡಿತ್ತು. ಈ ವಿಷಯ ತಿಳಿದು ಯುವಕರನ್ನು ಬಿಡಿಸಿಕೊಂಡು ಬರಲು ಹಿಂದು ಯುವಕರ ಗುಂಪು ಹೋಗಿದೆ. ಈ ವೇಳೆ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸಿದ್ದಾರೆ. ಮುಸ್ಲಿಂ ಯುವಕರು ಹಲ್ಲೆ ನಡೆಸಿದ್ದರಿಂದ 6 ಯುವಕರು ಗಾಯಗೊಂಡಿದ್ದರು. ಗಾಯಾಳುಗಳನ್ನು ಹೊಳೆಹೊನ್ನೂರು ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇತ್ತ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಪೊಲೀಸ್ ಠಾಣೆ ಪ್ರತಿಭಟನೆಯನ್ನೂ ನಡೆಸಿದ್ದರು. ನಮ್ಮ ಮನೆಗಳಿಗೆ ನುಗ್ಗಿ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಗ್ರಾಮದ ಮಹಿಳೆಯರು ಆರೋಪಿಸಿದ್ದರು. ಹೊಳೆಹೊನ್ನೂರು ಪೊಲೀಸ್ ಠಾಣೆ ಎದುರು ಭಾನುವಾರ ರಾತ್ರಿ ಪೂರ್ತಿ ನೂರಾರು ಸಂಖ್ಯೆಯಲ್ಲಿ ಜನರು ಸೇರಿ, ಹಲ್ಲೆ ಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸ್ಥಳಕ್ಕೆ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಇದನ್ನೂ ಓದಿ; ಟ್ಯಾಕ್ಸಿಗಳ ಕಳ್ಳಾಟಕ್ಕೆ ಬ್ರೇಕ್; ಸಾರಿಗೆ ಇಲಾಖೆಯಿಂದ ಏಕರೂಪ ದರ ಅಸ್ತ್ರ ಪ್ರಯೋಗ
ಘಟನೆ ಕುರಿತು ಗಾಯಾಳುಗಳ ಪ್ರತಿಕ್ರಿಯೆ:
ಹೊಳೆಹೊನ್ನೂರು ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳು ಮುಕುಂದ ಹಾಗೂ ಭರತ್ ಸೂಕ್ತ ನ್ಯಾಯಕ್ಕೆ ಆಗ್ರಹಿಸಿದ್ದು, ಗಲಾಟೆ ವೇಳೆ ತಪ್ಪಾಯ್ತು ಅಂದರೂ ಬಿಡಲಿಲ್ಲ. ಮಕ್ಕಳು, ಮಹಿಳೆಯರನ್ನು ನೋಡದೆ ದೊಣ್ಣೆ, ಸೌದೆಯನ್ನು ಹಿಡಿದುಕೊಂಡು ಬಂದು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ನಿಮ್ಮನ್ನು ಬಿಡಲ್ಲ ಎಂದು ಕೊಲೆ ಬೆದರಿಕೆಯನ್ನು ಹಾಕಿದ್ದರು. ಅವರನ್ನು ಕೂಡಲೇ ಬಂಧಿಸಿ, ಸೂಕ್ತ ನ್ಯಾಯವನ್ನು ನಮಗೆ ಕೊಡಿಸಬೇಕು ಎಂದು ಆಗ್ರಹಿಸಿದರು. ಹಳೇ ದ್ವೇಷಕ್ಕೆ ಈ ಗಲಾಟೆ ಮಾಡಿದ್ದಾರೆ ಎಂದು ಮತ್ತೊಬ್ಬ ಗಾಯಳು ರವಿ ಎಂಬುವವರು ಆರೋಪಿಸಿದ್ದಾರೆ. ಮರದ ಕೊಂಬೆಯನ್ನು ಕಡಿದಿದ್ದನ್ನೇ ನೆಪ ಮಾಡಿಕೊಂಡು 60-70 ಜನ ಬಂದು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಟೈಲ್ಸ್ ಕಲ್ಲಿನಿಂದ ಹೊಡೆದಿದ್ದಾರೆ. ನಾವು ಯಾವುದೇ ಕಾರಣಕ್ಕೂ ಕೇಸ್ ಹಿಂಪಡೆಯುವುದಿಲ್ಲ. ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ರವಿ ಒತ್ತಾಯಿಸಿದರು.
ಈ ಘಟನೆ ಕುರಿತು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ ಎಂದು ಎಸ್ಪಿ ಮಿಥುನ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಹೊಳೆಹೊನ್ನೂರಿನ ಜಂಬರಘಟ್ಟೆ ಗ್ರಾಮದಲ್ಲಿ ಎರಡು ಕೋಮುಗಳ ನಡುವಿನ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಗ್ರಾಮದಲ್ಲಿ ಸ್ತಬ್ಧ ವಾತಾವರಣ ನಿರ್ಮಾಣವಾಗಿದೆ.
ಮಂಗನ ಕಾಯಿಲೆ | ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ 49 ಪಾಸಿಟಿವ್ ಪ್ರಕರಣ ವರದಿ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಂಗನ ಕಾಯಿಲೆ ಪ್ರಕರಣ ಹೆಚ್ಚುತ್ತಿದ್ದು, ಈ ಮಧ್ಯೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾನೆ ಗ್ರಾಮದ 79 ವರ್ಷದ ವೃದ್ಧ ಮಂಗನ ಕಾಯಿಲೆಗೆ ಬಲಿಯಾಗಿದ್ದಾರೆ. ಈ ಕುರಿತು ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.
ಇದನ್ನೂ ಓದಿ; ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದಲ್ಲಿ ಉದ್ಯೋಗ; ನೇರ ಸಂದರ್ಶನ ಮೂಲಕ ಆಯ್ಕೆ
ಮೂರು ಜಿಲ್ಲೆಗಳ ಅಧಿಕಾರಿಗಳ ಸಭೆ:
ಮಂಗನ ಕಾಯಿಲೆ ಚಿಕಿತ್ಸೆ ಕುರಿತು ಶನಿವಾರ ಡಿ.ಎಚ್.ಒ ಕಚೇರಿ ಸಭಾಂಗಣದಲ್ಲಿ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಕೋವಿಡ್ ಸೋಂಕಿನ ಮೇಲ್ವಿಚಾರಣೆಗೆ ತಜ್ಞ ವೈದ್ಯರ ನೇತೃತ್ವದಲ್ಲಿ ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಆರಂಭಿಸಿದ್ದ ಟೆಲಿ ಐಸಿಯು ವ್ಯವಸ್ಥೆ ಇನ್ನು ಮುಂದೆ ಮಂಗನ ಕಾಯಿಲೆ (ಕೆ.ಎಫ್.ಡಿ) ಸೋಂಕಿತರ ನೆರವಿಗೆ ಬಳಕೆಯಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ.ರಣದೀಪ್ ಹೇಳಿದರು. ಈಗ ಕೋವಿಡ್ ಸೋಂಕು ಕಡಿಮೆ ಆಗಿದೆ. ಹೀಗಾಗಿ ಈ ತಜ್ಞರ ತಂಡ ಕೆ.ಎಫ್.ಡಿ ವಿರುದ್ಧದ ಹೋರಾಟಕ್ಕೆ ಬಳಕೆಯಾಗಲಿದೆ. ಸೋಂಕಿತರಿಗೆ ಚಿಕಿತ್ಸೆಯ ಸಲಹೆ, ವೈದ್ಯಕೀಯ ನೆರವಿನ ಬಗ್ಗೆ ಸಂಬಂಧಿಸಿದವರೊಂದಿಗೆ ದಿನದ 24 ಗಂಟೆಯ ಸಂಪರ್ಕದಲ್ಲಿರುತ್ತದೆ. ಸೋಂಕಿತರಿಗೂ ಸಲಹೆ ಸೂಚನೆ ನೀಡಲಿದ್ದಾರೆ ಎಂದರು.
ಇದನ್ನೂ ಓದಿ; ಮಹಿಳೆಯರೇ ಸ್ವಂತ ಉದ್ಯಮ ಪ್ರಾರಂಭಿಸೋ ಆಸಕ್ತಿ ಇದೆಯೇ?; ಈ ಯೋಜನೆಯಡಿ ಸಿಗುತ್ತೆ 3 ಲಕ್ಷ ಸಾಲ
ಎರಡು ಜಿಲ್ಲೆಗಳಲ್ಲಿ ಇಬ್ಬರು ಸಾವು:
ವಾಡಿಕೆಯಂತೆ ಈ ವರ್ಷವೂ ಮೂರು ಜಿಲ್ಲೆಗಳಲ್ಲಿ ಕೆ.ಎಫ್.ಡಿ ಪ್ರಕರಣಗಳು ವರದಿಯಾಗಿವೆ. ಜ.1 ರಿಂದ ಫೆ.2 ರವರೆಗೆ ರಾಜ್ಯದಲ್ಲಿ ಒಟ್ಟು 2,288 ಕೆ.ಎಫ್.ಡಿ ಪರೀಕ್ಷೆ ನಡೆಸಲಾಗಿದೆ. ಶಿವಮೊಗ್ಗದಲ್ಲಿ 12, ಉತ್ತರ ಕನ್ನಡ 34 ಹಾಗೂ ಚಿಕ್ಕಮಗಳೂರಿನಲ್ಲಿ 3 ಸೇರಿ ಒಟ್ಟು 49 ಪಾಸಿಟಿವ್ ಪ್ರಕರಣ ವರದಿಯಾಗಿದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ.
ವೈದ್ಯಾಧಿಕಾರಿಗಳಿಗೆ ಸೂಚನೆ:
ಮಂಗನ ಕಾಯಿಲೆ (ಕೆಎಫ್ಡಿ) ಕಂಡುಬರುವ ಪ್ರದೇಶದಲ್ಲಿ ಯಾವುದೇ ರೀತಿಯ ಜ್ವರ ಕಂಡರೂ ಪರೀಕ್ಷೆ ಮಾಡಿಸಬೇಕು. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಹಾಗೂ ಸೋಂಕು ಹೆಚ್ಚದಂತೆ ಕ್ರಮ ವಹಿಸಬೇಕು. ಕೆ.ಎಫ್.ಡಿ ಸೋಂಕು ಪಾಸಿಟಿವ್ ಎಂದು ಗೊತ್ತಾದ ತಕ್ಷಣ ಆಸ್ಪತ್ರೆಗೆ ದಾಖಲಿಸಬೇಕು. ರೋಗ ಪ್ರಸರಣ ಸಾಮಾನ್ಯವಾಗಿ ಜನವರಿಯಿಂದ ಮಾರ್ಚ್ವರೆಗೆ ಇದ್ದು, ಈ ವೇಳೆ ತೀರ್ಥಹಳ್ಳಿ, ಸಾಗರ, ಸಿದ್ದಾಪುರ ಮತ್ತು ಹೊನ್ನಾವರ ಉಪ ವಿಭಾಗೀಯ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಮೀಸಲಿರಿಸಬೇಕು, ಅಗತ್ಯ ಔಷಧಿಗಳ ಲಭ್ಯತೆ ಇರುವಂತೆ ನೋಡಿಕೊಳ್ಳಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಡಿಎಂಪಿ ವಿತರಣೆ:
ಕೊಪ್ಪ ಹಾಗೂ ಶೃಂಗೇರಿ, ಎನ್.ಆರ್. ಪುರ ತಾಲೂಕಿನ ಕಾಡಂಚಿನ ಗ್ರಾಮಗಳ ಜನರಿಗೆ ಆರೋಗ್ಯ ಇಲಾಖೆಯಿಂದ ಡಿಎಂಪಿ ಆಯಿಲ್ ವಿತರಿಸಲಾಗುತ್ತಿದೆ. ಮನೆಯಿಂದ ಹೊರಗೆ, ಅರಣ್ಯ ಪ್ರದೇಶಕ್ಕೆ ಹೋಗುವಾಗ ಕಡ್ಡಾಯವಾಗಿ ಡಿಎಂಪಿ ಆಯಿಲ್ ಹಚ್ಚಿಕೊಳ್ಳುವಂತೆ ಅರಿವು ಮೂಡಿಸಲಾಗುತ್ತಿದೆ. ಡಿಎಂಪಿ ಆಯಿಲ್ ಹಚ್ಚಿಕೊಂಡರೆ ಉಣುಗುಗಳು ಮೈಗೆ ಅಂಟಿ ಕಚ್ಚುವುದಿಲ್ಲ, ಇದರಿಂದ ಮಂಗನ ಕಾಯಿಲೆಯಿಂದ ಬಚಾವಾಗಬಹುದಾಗಿದೆ.












