ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಂಗನ ಕಾಯಿಲೆ ಪ್ರಕರಣ ಹೆಚ್ಚುತ್ತಿದ್ದು, ಈ ಮಧ್ಯೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾನೆ ಗ್ರಾಮದ 79 ವರ್ಷದ ವೃದ್ಧ ಮಂಗನ ಕಾಯಿಲೆಗೆ ಬಲಿಯಾಗಿದ್ದಾರೆ. ಈ ಕುರಿತು ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ.
ಇದನ್ನೂ ಓದಿ; ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದಲ್ಲಿ ಉದ್ಯೋಗ; ನೇರ ಸಂದರ್ಶನ ಮೂಲಕ ಆಯ್ಕೆ

ಮೂರು ಜಿಲ್ಲೆಗಳ ಅಧಿಕಾರಿಗಳ ಸಭೆ:
ಮಂಗನ ಕಾಯಿಲೆ ಚಿಕಿತ್ಸೆ ಕುರಿತು ಶನಿವಾರ ಡಿ.ಎಚ್.ಒ ಕಚೇರಿ ಸಭಾಂಗಣದಲ್ಲಿ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಕೋವಿಡ್ ಸೋಂಕಿನ ಮೇಲ್ವಿಚಾರಣೆಗೆ ತಜ್ಞ ವೈದ್ಯರ ನೇತೃತ್ವದಲ್ಲಿ ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಆರಂಭಿಸಿದ್ದ ಟೆಲಿ ಐಸಿಯು ವ್ಯವಸ್ಥೆ ಇನ್ನು ಮುಂದೆ ಮಂಗನ ಕಾಯಿಲೆ (ಕೆ.ಎಫ್.ಡಿ) ಸೋಂಕಿತರ ನೆರವಿಗೆ ಬಳಕೆಯಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ.ರಣದೀಪ್ ಹೇಳಿದರು. ಈಗ ಕೋವಿಡ್ ಸೋಂಕು ಕಡಿಮೆ ಆಗಿದೆ. ಹೀಗಾಗಿ ಈ ತಜ್ಞರ ತಂಡ ಕೆ.ಎಫ್.ಡಿ ವಿರುದ್ಧದ ಹೋರಾಟಕ್ಕೆ ಬಳಕೆಯಾಗಲಿದೆ. ಸೋಂಕಿತರಿಗೆ ಚಿಕಿತ್ಸೆಯ ಸಲಹೆ, ವೈದ್ಯಕೀಯ ನೆರವಿನ ಬಗ್ಗೆ ಸಂಬಂಧಿಸಿದವರೊಂದಿಗೆ ದಿನದ 24 ಗಂಟೆಯ ಸಂಪರ್ಕದಲ್ಲಿರುತ್ತದೆ. ಸೋಂಕಿತರಿಗೂ ಸಲಹೆ ಸೂಚನೆ ನೀಡಲಿದ್ದಾರೆ ಎಂದರು.
ಇದನ್ನೂ ಓದಿ; ಮಹಿಳೆಯರೇ ಸ್ವಂತ ಉದ್ಯಮ ಪ್ರಾರಂಭಿಸೋ ಆಸಕ್ತಿ ಇದೆಯೇ?; ಈ ಯೋಜನೆಯಡಿ ಸಿಗುತ್ತೆ 3 ಲಕ್ಷ ಸಾಲ
ಎರಡು ಜಿಲ್ಲೆಗಳಲ್ಲಿ ಇಬ್ಬರು ಸಾವು:
ವಾಡಿಕೆಯಂತೆ ಈ ವರ್ಷವೂ ಮೂರು ಜಿಲ್ಲೆಗಳಲ್ಲಿ ಕೆ.ಎಫ್.ಡಿ ಪ್ರಕರಣಗಳು ವರದಿಯಾಗಿವೆ. ಜ.1 ರಿಂದ ಫೆ.2 ರವರೆಗೆ ರಾಜ್ಯದಲ್ಲಿ ಒಟ್ಟು 2,288 ಕೆ.ಎಫ್.ಡಿ ಪರೀಕ್ಷೆ ನಡೆಸಲಾಗಿದೆ. ಶಿವಮೊಗ್ಗದಲ್ಲಿ 12, ಉತ್ತರ ಕನ್ನಡ 34 ಹಾಗೂ ಚಿಕ್ಕಮಗಳೂರಿನಲ್ಲಿ 3 ಸೇರಿ ಒಟ್ಟು 49 ಪಾಸಿಟಿವ್ ಪ್ರಕರಣ ವರದಿಯಾಗಿದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ.
ವೈದ್ಯಾಧಿಕಾರಿಗಳಿಗೆ ಸೂಚನೆ:
ಮಂಗನ ಕಾಯಿಲೆ (ಕೆಎಫ್ಡಿ) ಕಂಡುಬರುವ ಪ್ರದೇಶದಲ್ಲಿ ಯಾವುದೇ ರೀತಿಯ ಜ್ವರ ಕಂಡರೂ ಪರೀಕ್ಷೆ ಮಾಡಿಸಬೇಕು. ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಹಾಗೂ ಸೋಂಕು ಹೆಚ್ಚದಂತೆ ಕ್ರಮ ವಹಿಸಬೇಕು. ಕೆ.ಎಫ್.ಡಿ ಸೋಂಕು ಪಾಸಿಟಿವ್ ಎಂದು ಗೊತ್ತಾದ ತಕ್ಷಣ ಆಸ್ಪತ್ರೆಗೆ ದಾಖಲಿಸಬೇಕು. ರೋಗ ಪ್ರಸರಣ ಸಾಮಾನ್ಯವಾಗಿ ಜನವರಿಯಿಂದ ಮಾರ್ಚ್ವರೆಗೆ ಇದ್ದು, ಈ ವೇಳೆ ತೀರ್ಥಹಳ್ಳಿ, ಸಾಗರ, ಸಿದ್ದಾಪುರ ಮತ್ತು ಹೊನ್ನಾವರ ಉಪ ವಿಭಾಗೀಯ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಮೀಸಲಿರಿಸಬೇಕು, ಅಗತ್ಯ ಔಷಧಿಗಳ ಲಭ್ಯತೆ ಇರುವಂತೆ ನೋಡಿಕೊಳ್ಳಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಡಿಎಂಪಿ ವಿತರಣೆ:
ಕೊಪ್ಪ ಹಾಗೂ ಶೃಂಗೇರಿ, ಎನ್.ಆರ್. ಪುರ ತಾಲೂಕಿನ ಕಾಡಂಚಿನ ಗ್ರಾಮಗಳ ಜನರಿಗೆ ಆರೋಗ್ಯ ಇಲಾಖೆಯಿಂದ ಡಿಎಂಪಿ ಆಯಿಲ್ ವಿತರಿಸಲಾಗುತ್ತಿದೆ. ಮನೆಯಿಂದ ಹೊರಗೆ, ಅರಣ್ಯ ಪ್ರದೇಶಕ್ಕೆ ಹೋಗುವಾಗ ಕಡ್ಡಾಯವಾಗಿ ಡಿಎಂಪಿ ಆಯಿಲ್ ಹಚ್ಚಿಕೊಳ್ಳುವಂತೆ ಅರಿವು ಮೂಡಿಸಲಾಗುತ್ತಿದೆ. ಡಿಎಂಪಿ ಆಯಿಲ್ ಹಚ್ಚಿಕೊಂಡರೆ ಉಣುಗುಗಳು ಮೈಗೆ ಅಂಟಿ ಕಚ್ಚುವುದಿಲ್ಲ, ಇದರಿಂದ ಮಂಗನ ಕಾಯಿಲೆಯಿಂದ ಬಚಾವಾಗಬಹುದಾಗಿದೆ.
ಕೊಪ್ಪ: ಸಂಬಳದ ಹಣ ಕೇಳಿದ್ದಕ್ಕೆ ಮನಸ್ಸೋ ಇಚ್ಚೆ ಹಲ್ಲೆ
ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಸಂಬಳದ ಹಣ ಕೇಳಿದ್ದಕ್ಕೆ ಕಾಡಿನಲ್ಲಿ ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಸೋಮಲಾಪುರ ನಿರ್ಜನ ಪ್ರದೇಶದಲ್ಲಿ ನಡೆದಿದೆ. ಸತೀಶ್ ಹಲ್ಲೆಗೊಳಗಾದ ಹೋಟೆಲ್ ಕಾರ್ಮಿಕ.
ಬೆಂಗಳೂರಿನಲ್ಲಿ ಕೊಪ್ಪ ಮೂಲದ ಮಂಜು ಎಂಬುವರ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಸತೀಶ್, ಸಂಬಳದ ವಿಚಾರವಾಗಿ ಗಲಾಟೆಯಿಂದ ಕೆಲಸ ಬಿಟ್ಟು ಊರಿಗೆ ಬಂದಿದ್ದ. ಹೋಟೇಲ್ ಮಾಲೀಕ ಮಂಜುಗೆ ಫೋನ್ ಮೂಲಕ ಸಂಬಳ ಕೇಳುತ್ತಿದ್ದ. ಈ ವಿಚಾರವಾಗಿ ಕೆಲಸದ ಹಣ ಕೊಡುವುದಾಗಿ ಕರೆಸಿ ಮರಕ್ಕೆ ಕಟ್ಟಿ ಹಾಕಿ ಆರು ಜನರಿಂದ ರಾಡ್, ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ಈ ಘಟನೆಯ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹೇಶ್, ವಿಠಲ್, ಸಿರಿಲ್, ಸುನೀಲ್, ಸುನೀಲ್ ಕಟ್ಟೆಹಕ್ಲು, ಮಂಜು ಎಂಬುವವರ ವಿರುದ್ಧ ಸತೀಶ್ ದೂರು ನೀಡಿದ್ದಾರೆ. ಬಟ್ಟೆ ಬಿಚ್ಚಿ, ದೊಣ್ಣೆ, ರಾಡ್, ಬೆಲ್ಟ್ ನಿಂದ ಹೊಡೆದಿದ್ದಾರೆ. ಕೊಪ್ಪ ದ್ಯಾವೇಗೌಡ ವೃತ್ತದಲ್ಲಿರುವ ಪೆಟ್ರೋಲ್ ಬಂಕ್ ಬಳಿ ಬಿಟ್ಟು ಹೋಗಿದ್ದಾರೆ. ಅಲ್ಲದೆ ಪೊಲೀಸರಿಗೆ ದೂರು ನೀಡಿದರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇನ್ನು ಸತೀಶ್ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












