ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಸರ್ಕಾರಿ ಬಸ್ಸಿನ ಚಕ್ರಕ್ಕೆ ನಟ್ ಗಳೇ ಇಲ್ಲದೆ ಸಾರಿಗೆ ಇಲಾಖೆ ಬೇಜವಾಬ್ದಾರಿತನ ತೋರಿರುವ ಘಟನೆ ಚಿಕ್ಕಮಗಳೂರು ಡಿಪೋಗೆ ಸೇರಿದ ಸರ್ಕಾರಿ ಬಸ್ ನಲ್ಲಿ ನಡೆದಿದೆ.
ಇದನ್ನೂ ಓದಿ; ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ನೇಮಕಾತಿ; ನೇಮಕಾತಿಯ ಕುರಿತು ವಿವರ ಇಲ್ಲಿದೆ

ಚಿಕ್ಕಮಗಳೂರು-ಆಲ್ದೂರು ಮಾರ್ಗದ ಲೋಕಲ್ ಬಸ್ಸಿನಲ್ಲಿ ಘಟನೆ ನಡೆದಿದ್ದು, ಬಸ್ಸಿನ ಚಕ್ರದ ವೀಲ್ ಗೆ 8 ನಟ್ ಇರಬೇಕಾದ ಜಾಗದಲ್ಲಿ 3 ನಟ್ ಅಷ್ಟೆ ಇದ್ದು, ಅದೇ ಸ್ಥಿತಿಯಲ್ಲಿ ನಿತ್ಯ ಬಸ್ಸನ್ನ ಚಲಾಯಿಸುತ್ತಾ ಇದ್ದಾರೆ.

ನಿತ್ಯ ಶಾಲಾ-ಕಾಲೇಜು, ಆಸ್ಪತ್ರೆ, ಕೆಲಸ ಕಾರ್ಯ ಅಂತ ನೂರಾರು ಜನ ಓಡಾಡುತ್ತಾರೆ. ಏನಾದರೂ ಹೆಚ್ಚು-ಕಡಿಮೆಯಾದರೆ ಜವಾಬ್ದಾರಿ ಯಾರು…? ಎಂದು ಸಾರಿಗೆ ಇಲಾಖೆ ವಿರುದ್ಧ ಸ್ಥಳಿಯರು ಆಕ್ರೋಶ ಹೊರಹಾಕಿದ್ದಾರೆ.

ಆಹಾರ ತಜ್ಞ ಕೆ.ಸಿ.ರಘು ಇನ್ನಿಲ್ಲ
ಬೆಂಗಳೂರು/ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮಾಧ್ಯಮ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿ ಆಹಾರ ಕ್ರಮದ ಕುರಿತು ಟಿಪ್ಸ್ ನೀಡುತ್ತಿದ್ದ ಹೆಸರಾಂತರ ಆಹಾರ ತಜ್ಞ ಕೆ.ಸಿ.ರಘು ಅನಾರೋಗ್ಯದಿಂದ ಇಂದು ನಿಧನ ಹೊಂದಿದ್ದಾರೆ.
ಈ ಕುರಿತು ರಘು ಅವರ ಪತ್ನಿ ಆಶಾ ರಘು ಮಾಹಿತಿ ನೀಡಿದ್ದಾರೆ. ಕೆ.ಸಿ.ರಘು ಬೆಳಗಿನ ಜಾವ ಸುಮಾರು 7.30 ಕ್ಕೆ ಅಗಲಿದ್ದಾರೆ. ರಘು ಅವರು ಲಂಗ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಇನ್ನು ದಾಸರಹಳ್ಳಿಯ ಅಮೃತನಗರದಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ರಘು ಅವರು ಅನೇಕ ವರ್ಷಗಳ ಕಾಲ ಫುಡ್ ಆಯಂಡ್ ನ್ಯೂಟ್ರೇಷನ್ ವರ್ಲ್ಡ್ ಎಂಬ ಆಂಗ್ಲ ನಿಯತಕಾಲಿಕದ ಸಂಪಾದಕರಾಗಿದ್ದರು. ಅನೇಕ ದಿನಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದರು. ಸಾಮಾನ್ಯ ವಿಜ್ಞಾನ ಮತ್ತು ಆರ್ಥಿಕತೆಯ ವಿಷಯಗಳನ್ನು ಅತಿಥಿ ಉಪನ್ಯಾಸಕರಾಗಿ ನಿರ್ವಹಿಸಿ ಸೈ ಎನಿಸಿಕೊಂಡಿದ್ದರು. ಅವರು ಸ್ಥಾಪಿಸಿದ ಪ್ರಿಸ್ಟೀನ್ ಆರ್ಗ್ಯಾನಿಕ್ಸ್ ಎಂಬ ಸಂಸ್ಥೆಯಲ್ಲಿ ನವಜಾತ ಶಿಶುಗಳಲ್ಲಿ ಕಂಡು ಬರುವ ಮಾರಕ ಕಾಯಿಲೆಗಳಿಗೆ ಪೌಷ್ಟಿಕಾಂಶದ ಪರಿಹಾರವನ್ನು ಸಂಶೋಧನೆಯಿಂದ ಕಂಡು ಹಿಡಿದಿದ್ದರು. ಬಳಿಕ ದೇಶಾದ್ಯಂತ ಹಾಗೂ ವಿದೇಶಕ್ಕೂ ಒದಗಿಸುತ್ತಿದ್ದರು. ಈ ಕಾರ್ಯದಿಂದ ಸುಮಾರು 5 ಸಾವಿರ ನವಜಾತ ಶಿಶುಗಳನ್ನು ಸಾವಿನ ದವಡೆಯಿಂದ ಪಾರು ಮಾಡಲಾಗಿದೆ ಎನ್ನಲಾಗಿದೆ.
ಭಾರತದಲ್ಲಿ ಈ ರೀತಿಯ ಪರಿಹಾರ ಒದಗಿಸುವ ಏಕೈಕ ಸಂಸ್ಥೆಯಾಗಿತ್ತು. ಕೆ.ಸಿ.ರಘು, ಅನೇಕ ವಿಷಯಗಳ ಆಳವಾದ ಆಸಕ್ತಿ ಮತ್ತು ಜ್ಞಾನವನ್ನು ಉಳ್ಳವರಾಗಿ ಸದಾ ಅಧ್ಯಯನದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಕೆ.ಸಿ. ರಘು, ಲೇಖಕರಾಗಿ ಆಹಾರಕ್ಕೆ ಸಂಬಂಧಪಟ್ಟ ‘ಆಹಾರ ರಾಜಕೀಯ’ಮತ್ತು ‘ತುತ್ತು ತತ್ವ’ ಪುಸ್ತಕಗಳನ್ನು ಪ್ರಕಟಿಸಿದ್ದರು.
ಇನ್ನು ರಘು ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ ಕಲ್ಮನೆ ಗ್ರಾಮದವರು. ಕಲ್ಮನೆ ದಿವಂಗತ ಕಳಸೇಗೌಡರ ಮೊಮ್ಮಗ. ಕಲ್ಮನೆ ದಿವಂಗತ ಚಂದ್ರೇಗೌಡರ ಪುತ್ರ. ಇವರು ತಮ್ಮ ಉನ್ನತ ವಿದ್ಯಾಭ್ಯಾಸದ ನಂತರ ಭವಿಷ್ಯ ಅರಸಿ ಬೆಂಗಳೂರು ಸೇರಿದ್ದರು.
ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಕುಟುಂಬ ವರ್ಗಕ್ಕೆ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.












