ಬೆಂಗಳೂರು/ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮಾಧ್ಯಮ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿ ಆಹಾರ ಕ್ರಮದ ಕುರಿತು ಟಿಪ್ಸ್ ನೀಡುತ್ತಿದ್ದ ಹೆಸರಾಂತರ ಆಹಾರ ತಜ್ಞ ಕೆ.ಸಿ.ರಘು ಅನಾರೋಗ್ಯದಿಂದ ಇಂದು ನಿಧನ ಹೊಂದಿದ್ದಾರೆ.
ಇದನ್ನೂ ಓದಿ; ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ನೇಮಕಾತಿ; ನೇಮಕಾತಿಯ ಕುರಿತು ವಿವರ ಇಲ್ಲಿದೆ

ಈ ಕುರಿತು ರಘು ಅವರ ಪತ್ನಿ ಆಶಾ ರಘು ಮಾಹಿತಿ ನೀಡಿದ್ದಾರೆ. ಕೆ.ಸಿ.ರಘು ಬೆಳಗಿನ ಜಾವ ಸುಮಾರು 7.30 ಕ್ಕೆ ಅಗಲಿದ್ದಾರೆ. ರಘು ಅವರು ಲಂಗ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಇನ್ನು ದಾಸರಹಳ್ಳಿಯ ಅಮೃತನಗರದಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ; ಸಾರ್ವಜನಿಕರ ಗಮನಕ್ಕೆ; ರಾಜ್ಯದ ಪ್ರತಿಯೊಬ್ಬರ ಮೊಬೈಲ್ ಗೆ ಬರಲಿದೆ ಎಮರ್ಜೆನ್ಸಿ ಅಲರ್ಟ್!
ರಘು ಅವರು ಅನೇಕ ವರ್ಷಗಳ ಕಾಲ ಫುಡ್ ಆಯಂಡ್ ನ್ಯೂಟ್ರೇಷನ್ ವರ್ಲ್ಡ್ ಎಂಬ ಆಂಗ್ಲ ನಿಯತಕಾಲಿಕದ ಸಂಪಾದಕರಾಗಿದ್ದರು. ಅನೇಕ ದಿನಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆಯುತ್ತಿದ್ದರು. ಸಾಮಾನ್ಯ ವಿಜ್ಞಾನ ಮತ್ತು ಆರ್ಥಿಕತೆಯ ವಿಷಯಗಳನ್ನು ಅತಿಥಿ ಉಪನ್ಯಾಸಕರಾಗಿ ನಿರ್ವಹಿಸಿ ಸೈ ಎನಿಸಿಕೊಂಡಿದ್ದರು. ಅವರು ಸ್ಥಾಪಿಸಿದ ಪ್ರಿಸ್ಟೀನ್ ಆರ್ಗ್ಯಾನಿಕ್ಸ್ ಎಂಬ ಸಂಸ್ಥೆಯಲ್ಲಿ ನವಜಾತ ಶಿಶುಗಳಲ್ಲಿ ಕಂಡು ಬರುವ ಮಾರಕ ಕಾಯಿಲೆಗಳಿಗೆ ಪೌಷ್ಟಿಕಾಂಶದ ಪರಿಹಾರವನ್ನು ಸಂಶೋಧನೆಯಿಂದ ಕಂಡು ಹಿಡಿದಿದ್ದರು. ಬಳಿಕ ದೇಶಾದ್ಯಂತ ಹಾಗೂ ವಿದೇಶಕ್ಕೂ ಒದಗಿಸುತ್ತಿದ್ದರು. ಈ ಕಾರ್ಯದಿಂದ ಸುಮಾರು 5 ಸಾವಿರ ನವಜಾತ ಶಿಶುಗಳನ್ನು ಸಾವಿನ ದವಡೆಯಿಂದ ಪಾರು ಮಾಡಲಾಗಿದೆ ಎನ್ನಲಾಗಿದೆ.
ಭಾರತದಲ್ಲಿ ಈ ರೀತಿಯ ಪರಿಹಾರ ಒದಗಿಸುವ ಏಕೈಕ ಸಂಸ್ಥೆಯಾಗಿತ್ತು. ಕೆ.ಸಿ.ರಘು, ಅನೇಕ ವಿಷಯಗಳ ಆಳವಾದ ಆಸಕ್ತಿ ಮತ್ತು ಜ್ಞಾನವನ್ನು ಉಳ್ಳವರಾಗಿ ಸದಾ ಅಧ್ಯಯನದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಕೆ.ಸಿ. ರಘು, ಲೇಖಕರಾಗಿ ಆಹಾರಕ್ಕೆ ಸಂಬಂಧಪಟ್ಟ ‘ಆಹಾರ ರಾಜಕೀಯ’ಮತ್ತು ‘ತುತ್ತು ತತ್ವ’ ಪುಸ್ತಕಗಳನ್ನು ಪ್ರಕಟಿಸಿದ್ದರು.
ಇನ್ನು ರಘು ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ ಕಲ್ಮನೆ ಗ್ರಾಮದವರು. ಕಲ್ಮನೆ ದಿವಂಗತ ಕಳಸೇಗೌಡರ ಮೊಮ್ಮಗ. ಕಲ್ಮನೆ ದಿವಂಗತ ಚಂದ್ರೇಗೌಡರ ಪುತ್ರ. ಇವರು ತಮ್ಮ ಉನ್ನತ ವಿದ್ಯಾಭ್ಯಾಸದ ನಂತರ ಭವಿಷ್ಯ ಅರಸಿ ಬೆಂಗಳೂರು ಸೇರಿದ್ದರು.
ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಕುಟುಂಬ ವರ್ಗಕ್ಕೆ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿ ಪತ್ನಿಯನ್ನ ಕೊಂದ ಪತಿ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕುಡಿದ ಮತ್ತಿನಲ್ಲಿ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಿರಗುಂದ ಗ್ರಾಮದಲ್ಲಿ ನಡೆದಿದೆ. ಪದ್ಮಾಕ್ಷಿ (40) ಮೃತ ದುರ್ದೈವಿ.
ಪದ್ಮಾಕ್ಷಿ ತನ್ನ ಮನೆಯ ಮುಂಭಾಗದಲ್ಲಿ ಬಿದ್ದಿದ್ದು, ಇಂದು ಬೆಳಿಗ್ಗೆ ಅಕ್ಕಪಕ್ಕದ ಮನೆಯವರು ಇದನ್ನು ಗಮನಿಸಿ ಪರಿಶೀಲಿಸಿದಾಗ ಆಕೆ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಆಕೆಯ ಪತಿ ಚಂದ್ರು ಮನೆಯೊಳಗೆ ಮಲಗಿರುವುದು ಕಂಡು ಬಂದಿತ್ತು. ಪತಿ ಚಂದ್ರು ಕುಡಿದ ಮತ್ತಿನಲ್ಲಿ ತನ್ನ ಪತ್ನಿಯನ್ನು ಕೊಡಲಿಯಿಂದ ಹೊಡೆದು ಮನೆಯಿಂದ ಹೊರ ತಳ್ಳಿದ್ದಾನೆ.
ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಮಗಳು ವಿದ್ಯಾಭ್ಯಾಸ ಮೊಟಕುಗೊಳಿಸಿ ಮನೆಯಲ್ಲಿಯೇ ಇದ್ದು, ಇನ್ನೋರ್ವ ಮಗಳು ಬೇಲೂರು ಹಾಸ್ಟೆಲ್ ನಲ್ಲಿ ಇದ್ದುಕೊಂಡು ಹೈಸ್ಕೂಲ್ ವ್ಯಾಸಾಂಗ ಮಾಡುತ್ತಿದ್ದಾಳೆ ಎಂದು ತಿಳಿದುಬಂದಿದೆ. ನಿನ್ನೆ ಮಗಳು ಸಂಬಂಧಿಕರ ಮನೆಗೆ ತೆರಳಿದ್ದಳು ಮನೆಯಲ್ಲಿ ಗಂಡ ಹೆಂಡತಿ ಇಬ್ಬರೇ ಇದ್ದರು ಎನ್ನಲಾಗಿದೆ.
ಗೋಣಿಬೀಡು ಪೊಲೀಸರ ಭೇಟಿ ನೀಡಿ ಆರೋಪಿಯನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ.












